ಪದ್ಮಶ್ರೀ ಪುರಸ್ಕೃತ ರಾಜೀವ್ ತಾರಾನಾಥ್ ಅವರ ಆರೋಗ್ಯ ವಿಚಾರಿಸಿದ ಸಚಿವ ಎಚ್.ಸಿ.ಮಹದೇವಪ್ಪ
ತಾರಾನಾಥ್ ಅವರ ಸಾಧನೆಗೆ ಮೆಚ್ಚುಗೆ ಸೂಚಿಸಿ, ಶೀಘ್ರ ಚೇತರಿಕೆಗೆ ಶುಭ ಹಾರೈಸಿದ ಸಚಿವರು
ಮೈಸೂರು : ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಅಸ್ವಸ್ಥರಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಗೀತ ಲೋಕದ ವಿಶ್ವ ಶ್ರೇಷ್ಠ ಸರೋದ್ ವಾದಕ ಪದ್ಮಶ್ರೀ ಪಂಡಿತ್ ರಾಜೀವ್ ತಾರಾನಾಥ್ ಅವರನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್. ಸಿ. ಮಹದೇವಪ್ಪ ಅವರು ಭೇಟಿ ಮಾಡಿ ಅರೋಗ್ಯ ವಿಚಾರಿಸಿದರು.
ಕಳೆದ 15ಕ್ಕೂ ಹೆಚ್ಚು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿರುವ ತಾರಾನಾಥ್ ಅವರ ಆರೋಗ್ಯದ ಸ್ಥಿತಿ ಗತಿ ಕುರಿತು ಸಚಿವರು ವೈದ್ಯ ಸಿಬ್ಬಂದಿ ಹಾಗೂ ಕುಟುಂಬ ಸದಸ್ಯರ ಜೊತೆ ಚರ್ಚಿಸಿದರು.
ಬಳಿಕ ಬೇಗ ಚೇತರಿಸಿಕೊಳ್ಳುವಂತೆ ತಾರಾನಾಥ್ ಅವರಿಗೆ ಶುಭ ಹಾರೈಸಿದ ಸಚಿವರು, ಈ ಹೊತ್ತಲ್ಲಿ ಸರ್ಕಾರದ ನೆರವು ದೊರಕಿಸಿಕೊಡುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಮೈಸೂರು ಜಿಲ್ಲಾ ಕಾಂಗ್ರೆಸ್ ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಡಾ.ಶ್ವೇತಾ ಮಡಪ್ಪಾಡಿ ಅವರು ಈ ಸಂದರ್ಭದಲ್ಲಿ ಸಚಿವರ ಜೊತೆ ಉಪಸ್ಥಿತರಿದ್ದು, ರಾಜೀವ್ ತಾರಾನಾಥ್ ಅವರು ಕೇವಲ ಸಂಗೀತ ಕ್ಷೇತ್ರಕ್ಕೆ ಮಾತ್ರವಲ್ಲದೆ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ನೀಡಿರುವ ಕೊಡುಗೆಗಳನ್ನು ಸ್ಮರಿಸಿ ಬೇಗ ಚೇತರಿಸಿಕೊಳ್ಳುವಂತೆ ಹಾರೈಸಿದರು.
ತಾರಾನಾಥ್ ಅವರು ಸಂಗೀತ ಲೋಕದಲ್ಲಷ್ಟೇ ಅಲ್ಲದೆ, ಇಂಗ್ಲೀಷ್ ಪ್ರಾಧ್ಯಾಪಕರಾಗಿ, ಅನುವಾದಕರಾಗಿ ಸಾಹಿತ್ಯ ಕ್ಷೇತ್ರದಲ್ಲೂ ಸಾಕಷ್ಟು ಕೆಲಸ ಮಾಡಿದ್ದು, ಇವರ ಸಾಧನೆಯನ್ನು ಗುರುತಿಸಿ ಸಂಗೀತ ರತ್ನ ಮೈಸೂರು ಟಿ. ಚೌಡಯ್ಯ ಸ್ಮಾರಕ ಪ್ರಶಸ್ತಿ 1998 (ಕರ್ನಾಟಕ ಸರಕಾರ, ಭಾರತ), ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ 1993, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 1996, ಕೆಂಪೇಗೌಡ ಪ್ರಶಸ್ತಿ 2006, ಗಾಯನ ಸಮಾಜದಿಂದ ಸಂಗೀತ ಕಲಾರತ್ನ ಜ್ಯೋತಿ ಸುಬ್ರಮಣ್ಯ ಪ್ರಶಸ್ತಿ, ಭ್ರಮರಾಂಬಾ ಎನ್.ನಾಗರಾಜ್ ಬಂಗಾರದ ಪದಕ, ವಿ. ಟಿ. ಶ್ರೀನಿವಾಸನ್ ಸ್ಮಾರಕ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ 'ನಾಡೋಜ' ಪ್ರಶಸ್ತಿ ಅಲ್ಲದೇ ಪ್ರತಿಷ್ಠಿತ 'ಪದ್ಮಶ್ರೀ' ಪ್ರಶಸ್ತಿಯೂ ಲಭಿಸಿದೆ.