ಮೈಸೂರು | ಸಿಎಂ ಸಿದ್ಧರಾಮಯ್ಯ ಆಪ್ತ ರಾಕೇಶ್ ಪಾಪಣ್ಣ ಮನೆ ಮೇಲೆ ಈ.ಡಿ ದಾಳಿ
ಸಾಂದರ್ಭಿಕ ಚಿತ್ರ(PTI)
ಮೈಸೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಆಪ್ತ ಹಿನಕಲ್ ಪಾಪಣ್ಣ ಅವರ ಪುತ್ರ ಮಾಜಿ ಜಿ.ಪಂ.ಸದಸ್ಯ ರಾಕೇಶ್ ಪಾಪಣ್ಣ ಅವರ ಮನೆ ಮೇಲೆ ಈ.ಡಿ ದಾಳಿ ಮಾಡಿ ವಿಚಾರಣೆ ನಡೆಸಿದೆ.
ಹಿನಕಲ್ ಗ್ರಾಮದಲ್ಲಿರುವ ರಾಕೇಶ್ ಪಾಪಣ್ಣ ಮನೆಗೆ ಸೋಮವಾರ ಬೆಳಿಗ್ಗೆ ದಾಳಿ ನಡೆಸಿದ ಈ.ಡಿ. ಆಧಿಕಾರಿಗಳ ತಂಡ ಅವರನ್ನು ವಿಚಾರಣೆಗೊಳಪಡಿಸಿದೆ.
ಇದೇ ವೇಳೆ ಮನೆಯಲ್ಲೇ ರಾಕೇಶ್ ಪಾಪಣ್ಣರನ್ನು ಇರಿಸಿಕೊಂಡು ಅಧಿಕಾರಿಗಳು, ವಿಚಾರಣೆ ನಡೆಸಿದ್ದಾರೆ. ಸುಮಾರು 5ಕ್ಕೂ ಹೆಚ್ಚು ಈಡಿ ಅಧಿಕಾರಿಗಳಿಂದ ಶೋಧ ಕಾರ್ಯ ನಡೆದಿದೆ. ಮುಡಾ 50-50 ಹಗರಣದಲ್ಲಿ ರಾಕೇಶ್ ಪಾಪಣ್ಣ ಹೆಸರು ಕೂಡ ಕೇಳಿ ಬಂದಿತ್ತು. 50-50 ನಿಯಮದಲ್ಲಿ 20ಕ್ಕೂ ಹೆಚ್ಚು ನಿವೇಶನಗಳನ್ನು ರಾಕೇಶ್ ಪಾಪಣ್ಣ ಪಡೆದುಕೊಂಡಿದ್ದಾರೆ ಎಂಬ ಆರೋಪವಿದೆ.
ಇನ್ನು ವಿಜಯನಗರ ಎರಡನೇ ಹಂತದಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿಯವರು ಪಡೆದ ನಿವೇಶದ ವಿಚಾರದಲ್ಲೂ ಕೂಡ ರಾಕೇಶ್ ಪಾಪಣ್ಣ ಕುಟುಂಬದ ಹೆಸರು ಕೇಳಿ ಬಂದಿತ್ತು. ರಾಕೇಶ್ ಪಾಪಣ್ಣ ಕುಟುಂಬದಿಂದ 10 ಗುಂಟೆ ಜಾಗ ಪಡೆದು ಸಿದ್ದರಾಮಯ್ಯ ಮನೆ ಕಟ್ಟಿದ್ದಾರೆ. ಈ ವಿಚಾರದಲ್ಲಿ ಕೂಡ ಅಕ್ರಮ ಆರೋಪ ಕೇಳಿ ಬಂದಿತ್ತು. ಹೀಗಾಗಿ ಆ ಮನೆಯನ್ನು ಸಿದ್ದರಾಮಯ್ಯ ಮಾರಾಟ ಮಾಡಿದ್ದರು. ಸದ್ಯ ಈ ಪ್ರಕರಣ ಸುಪ್ರೀಂಕೋರ್ಟ್ ಅಂಗಳದಲ್ಲಿದೆ.