ಪ್ರಾಸಿಕ್ಯೂಷನ್‌ಗೆ ಅನುಮತಿ | ರಾಜ್ಯಪಾಲರ ನಡೆ ಖಂಡಿಸಿ ʼಕರ್ನಾಟಕ ಜನರಂಗʼದಿಂದ 24 ಗಂಟೆ ಅಹೋರಾತ್ರಿ ಧರಣಿ
ಕೇಂದ್ರಪಾಲಕರಿಗೇಕೆ ಝಡ್ ಪ್ಲಸ್ ಭದ್ರತೆ : ಹಂಸಲೇಖ ಪ್ರಶ್ನೆ
ಮೈಸೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ನಡೆ ಖಂಡಿಸಿ ʼಕರ್ನಾಟಕ ಜನರಂಗʼದ ವತಿಯಿಂದ 24 ಗಂಟೆಗಳ ಅಹೋರಾತ್ರಿ ಧರಣಿಯನ್ನು ಶನಿವಾರ ಆರಂಭಿಸಲಾಗಿದೆ.
ನಗರದ ಕೆ.ಆರ್.ಮಾರುಕಟ್ಟೆ ಬಳಿಯ ಚಿಕ್ಕಗಡಿಯಾರದ ಬಳಿ ಶನಿವಾರ ಸಂಜೆಯಿಂದ ರವಿವಾರ ಸಂಜೆವರೆಗೂ ಅಹೋರಾತ್ರಿ ಧರಣಿ ಆರಂಭಿಸಿದ್ದು, ಚಿಂತಕ ಬಂಜಗೆರೆ ಜಯಪ್ರಕಾಶ್ ಉದ್ಘಾಟನೆ ಮಾಡಿದರು.
ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ಸಂವಿಧಾನದ ಪರ ತೀರ್ಮಾನ ಕೈಗೊಂಡಿದ್ದರೆ ಅವರನ್ನು ರಾಜ್ಯಪಾಲರು ಎನ್ನಬಹುದಿತ್ತು, ಆದರೆ ಈಗ ಅವರು ಕೇಂದ್ರಪಾಲರಾಗಿದ್ದಾರೆ. ಇಂತಹ ಕೇಂದ್ರಪಾಲಕರಿಗೆ ಝಡ್ ಪ್ಲಸ್ ಭದ್ರತೆ, ಬುಲೆಟ್ ಪ್ರೂಫ್ ಕಾರ್ ನೀಡುವ ಅಗತ್ಯವಿತ್ತೇ? ಎಂದು ಪ್ರಶ್ನಿಸಿದರು.
ಸಿದ್ಧರಾಮಯ್ಯ ನಾಡಿನ ದೊಡ್ಡ ವ್ಯಕ್ತಿ, 40 ವರ್ಷದ ರಾಜಕಾರಣಲ್ಲಿ ಎಂದೂ ಅರೋಪ ಹೊಂದಿಲ್ಲ. ಆದರೆ ಬಿಜೆಪಿಯವರು ಅಧಿಕಾರದ ಹಪಾಹಪಿತನದಿಂದ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಿಮ್ಮ ಆಡಳಿತ ಬೇಸತ್ತು ಜನ ಕಾಂಗ್ರೆಸ್ ಅಧಿಕಾರಕ್ಕೆ ತಂದಿದ್ದಾರೆ. ಅವರು ಸುಲಲಿತ ಆಡಳಿತ ನೀಡಲು ಅವಕಾಶ ನೀಡಬೇಕು. ನಿಮಗೆ ಜನ ಅಧಿಕಾರ ಕೊಟ್ಟಿದ್ದರೆ, ನೀವೇ ಆಡಳಿತ ಮಾಡಿ ಆದು ಬಿಟ್ಟು ವಾಮಮಾರ್ಗದ ಆಟ ಬಿಡಿ ಎಂದರು.
ಧರಣಿಯಲ್ಲಿ ಚಿಂತಕ ಬಂಜಗೆರೆ ಜಯಪ್ರಕಾಶ್, ಸಂಗೀತ ನಿರ್ದೇಶಕ ಹಂಸಲೇಖ, ಪತ್ರಕರ್ತ ಟಿ.ಗುರುರಾಜ್, ಅಹಿಂದ ಮುಖಂಡ ಕೆ.ಎಸ್.ಶಿವರಾಮ್, ಜನಾರ್ಧನ್ (ಜನ್ನಿ), ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾರ್ಮಿಕ ಸಂಘಟನೆಯ ಜಗದೀಶ್ ಸೂರ್ಯ, ಸಾಹಿತಿ ನಾ.ದಿವಾಕರ, ಸವಿತಾ, ಸಭೀಹಾ ಭೂಮಿಗೌಡ, ರತಿರಾವ್, ನೆಲೆ ಹಿನ್ನಲೆ ಗೋಪಾಲಕೃಷ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.