ಸುತ್ತೂರು ಶ್ರೀಗಳ ಪುತ್ಥಳಿ ಸ್ಥಾಪನೆ ಪ್ರಶ್ನಿಸಿ ಅರ್ಜಿ: ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು: ಮೈಸೂರು ನಗರದ ಗನ್ ಹೌಸ್ ಸರ್ಕಲ್ನಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ರಾಜೇಂದ್ರ ಸ್ವಾಮೀಜಿ ಅವರ ಪುತ್ಥಳಿಯನ್ನು ಅನಧಿಕೃತವಾಗಿ ಸ್ಥಾಪಿಸಿದ್ದು, ಅದನ್ನು ತೆರವುಗೊಳಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಹಾಗೂ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಈ ಕುರಿತಂತೆ ಮೈಸೂರಿನ ಗಿರಿಯಾಭೋವಿ ಪಾಳ್ಯ ನಿವಾಸಿ ಸುಬ್ರಹ್ಮಣ್ಯ ಮತ್ತು ಕುರುಬರಹಳ್ಳಿ ನಿವಾಸಿ ಎನ್.ಶೀಲಾವತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ಸರಕಾರ, ಮೈಸೂರು ಜಿಲ್ಲಾಧಿಕಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಪೊಲೀಸ್ ಆಯುಕ್ತರು ಮತ್ತು ಮೈಸೂರು ವಿಭಾಗದ ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಎಂಜಿನಿಯರ್ ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಅಲ್ಲದೆ, ಅರ್ಜಿ ಕುರಿತು ಸಂಬಂಧಪಟ್ಟ ಸರಕಾರಿ ಪ್ರಾಧಿಕಾರಗಳಿಂದ ಅಗತ್ಯ ಮಾಹಿತಿ ಪಡೆದು ಮುಂದಿನ ಎರಡು ವಾರದಲ್ಲಿ ಆಕ್ಷೇಪಣೆ ಸಲ್ಲಿಸಬೇಕು ಎಂದು ನ್ಯಾಯಪೀಠವು ಸರಕಾರಕ್ಕೆ ನಿರ್ದೇಶಿಸಿತು. ಇದೇ ವೇಳೆ ಪ್ರತಿಮೆ ಅನಾವರಣ ಕಾರ್ಯಕ್ರಮ ಜ.4ರಂದು ನಡೆಯಲಿದ್ದು, ಅದಕ್ಕೆ ತಡೆಯಾಜ್ಞೆ ನೀಡಬೇಕು ಎಂಬ ಅರ್ಜಿದಾರರ ಮಧ್ಯಂತರ ಮನವಿ ತಿರಸ್ಕರಿಸಿದೆ. ಅನಾವರಣ ಕಾರ್ಯಕ್ರಮ ನಿಗದಿಯಾಗಿರುವ ಬಗ್ಗೆ ಯಾವುದೇ ದಾಖಲೆಗಳನ್ನು ಅರ್ಜಿದಾರರು ಸಲ್ಲಿಸದ ಹಿನ್ನೆಲೆಯಲ್ಲಿ ಅವರ ಮಧ್ಯಂತರ ಮನವಿ ಪರಿಗಣಿಸಲಾಗದು ಎಂದು ನ್ಯಾಯಪೀಠ ತಿಳಿಸಿದೆ.
ಮೈಸೂರಿನ ಗನ್ಹೌಸ್ ಸರ್ಕಲ್ನಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಪುತ್ಥಳಿಯನ್ನು ಇತ್ತೀಚೆಗೆ ರಾತ್ರೋರಾತ್ರಿ ಪ್ರತಿಷ್ಠಾಪಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಸ್ಥಳದಲ್ಲಿ ಪ್ರತಿಭಟನೆ ನಡೆದಿವೆ. ಸ್ವಾಮೀಜಿ ಪ್ರತಿಮೆಯನ್ನು ಅನಧಿಕೃತವಾಗಿ ಸ್ಥಾಪಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಪುತ್ಥಳಿ ಅಥವಾ ಪ್ರತಿಮೆ ಸ್ಥಾಪಿಸಬಾರದು ಎಂದು ನ್ಯಾಯಾಲಯಗಳು ಆದೇಶ ಮಾಡಿವೆ. ಆದ್ದರಿಂದ ಸ್ವಾಮೀಜಿಯ ಪುತ್ಥಳಿಯನ್ನು ತೆರವುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.