ನಿರ್ದಿಂಗತ ತಂಡದಿಂದ ವರ್ಷಾಂತ್ಯದಲ್ಲಿ ʼಶಾಲಾ ಮಕ್ಕಳ ರಂಗಹಬ್ಬʼ : ಪ್ರಕಾಶ್ ರಾಜ್
ಮೈಸೂರು : ಶಿಕ್ಷಣ ಮತ್ತು ರಂಗಭೂಮಿಯ ನೆಲೆಯಾಗಿರುವ ನಿರ್ದಿಂಗತ ತಂಡದಿಂದ ವರ್ಷಾಂತ್ಯದಲ್ಲಿ ಶಾಲಾ ಮಕ್ಕಳ ರಂಗಹಬ್ಬ ಮತ್ತು ನಿರ್ದಿಂಗತ ರಂಗಹಬ್ಬವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿರುರಂಗ ಮಂದಿರದಲ್ಲಿ ಡಿ.14 ಮತ್ತು 15ರಂದು ಶಾಲಾರಂಗ ಮಕ್ಕಳ ಹಬ್ಬ, 15ರಿಂದ 17ರವರೆಗೆ ನಿರ್ದಿಗಂತ ರಂಗ ಹಬ್ಬ ಆಯೋಜಿಸಲಾಗಿದೆ.
ಡಿ.14ರಂದು ಬೆಳಗ್ಗೆ 10.30ಕ್ಕೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ರಂಗಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಶಾಲಾರಂಗ ವಿಕಾಸ ಯೋಜನೆಯಡಿ ತರಬೇತಿ ಪಡೆದ ಮಕ್ಕಳು, ನಾಟಕಗಳ ಪ್ರದರ್ಶನದ ಜತೆಗೆ ಹಾಡು, ನೃತ್ಯ ಪ್ರದರ್ಶನ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಡಿ.15ರಂದು ಬೆಳಗ್ಗೆ 10ಕ್ಕೆ ಮೈಸೂರಿನ ಕಲಿಯುವ ಮನೆ ಮಕ್ಕಳಿಂದ ಬೆಳಕಿನ ಕಡೆಗೆ, ಮಧ್ಯಾಹ್ನ 12ಕ್ಕೆ ಅಂಬೇಡ್ಕರ್ ವಸತಿಯ ಶಾಲೆಯ ಮಕ್ಕಳ ತಂಡ ಪ್ರೀತಿಯ ಕಾಳು ನಾಟಕಗಳ ಪ್ರದರ್ಶನ ಮಾಡಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಡಿ.15ರ ನಿರ್ದಿಗಂತ ರಂಗ ಹಬ್ಬದಲ್ಲಿ ಡಾ.ಸವಿತಾ ರಾಣಿ ನಿರ್ದೇಶನದ ರಸೀದಿ ಟಿಕೆಟ್, ಡಿ.16ರಂದು ಶಕೀಲ್ ಅಹ್ಮದ್ ನಿರ್ದೇಶನದ ಅನಾಮಿಕನ ಸಾವು ಹಾಗೂ ಡಿ.17ರಂದು ಡಾ.ಶ್ರೀಪಾದ್ ಭಟ್ ನಿರ್ದೇಶನದ ಮಂಟೇಸ್ವಾಮಿ ಕಾವ್ಯ ಪ್ರಯೋಗವಿರುತ್ತದೆ. ಸಂಜೆ 7 ಗಂಟೆ ನಾಟಕ ಆರಂಭವಾಗಲಿವೆ ಎಂದು ತಿಳಿಸಿದರು.
110 ಶಾಲೆಗಳಲ್ಲಿ ತರಬೇತಿ: ಶಾಲಾರಂಗ ಯೋಜನೆಯಡಿ 10 ಜನರನ್ನೊಳಗೊಂಡ ರಂಗ ತಂಡವು ಸುಮಾರು 110 ಶಾಲೆಗಳಲ್ಲಿ 30 ನಿಮಿಷದ 3 ಕಿರುನಾಟಕಗಳು, ಗೊಂಬೆಯಾಟ, ಅಭಿನಯಗೀತೆಗಳು, ಕಥಾಭಿನಯಗಳು, ಮಕ್ಕಳ ಹಾಡುಗಳನ್ನು ಕಲಿಸಲಾಗಿದೆ. ಮಕ್ಕಳ ಕಲಿಕಗೆ ನೆರವಾಗಬಲ್ಲ ರಂಗಾಟಿಕೆಗಳು, ಹಾಡುಗಳು, ಲೇಖನಗಳ ಹೊತ್ತಿಗೆಯನ್ನು ನೀಡಲಾಗಿದೆ ಎಂದು ಹೇಳಿದರು.
ಶಾಲಾರಂಗ ವಿಕಾಸ ಎಂಬ ಪ್ರಾಯೋಗಿಕ ಯೋಜನೆಯನ್ವಯ 5 ಜನ ರಂಗ ಶಿಕ್ಷಕರನ್ನು ರಾಜ್ಯದ ವಿವಿಧ ಶಾಲೆಗಳಿಗೆ ಕಳುಹಿಸಿ 6 ತಿಂಗಳ ಕಾಲ ಶಾಲೆಯಲ್ಲಿ ಶಿಕ್ಷಣ ಮತ್ತು ರಂಗಭೂಮಿಯ ಕೊಡುಗೆಯ ಶೋಧದಲ್ಲಿ ಪ್ರತಿ ವಾರಾಂತ್ಯ ರಂಗ ಪ್ರದರ್ಶನ, ಬಣ್ಣದ ಹೆಜ್ಜೆ ಶಿಬಿರ, ಕಾವ್ಯರಂಗ ಮುಂತಾದ ಚಟುವಟಿಕೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ರಂಗ ತಂಡದ ನಾಟಕಗಳ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಕಲಾವಿದರಾದ ಅನುಷ್ ಶೆಟ್ಟಿ, ಅಮಿತ್, ಶಕೀಲ್ ಅಹಮ್ಮದ್ ಇದ್ದರು.
ಕಳ್ಳ ನನ್ಮಕ್ಕಳ ಬಗ್ಗೆ ಮಾತಾಡುವುದಿಲ್ಲ : ಪ್ರಕಾಶ್ ರಾಜ್
ನಿರ್ದಿಗಂತ ಶಾಲಾರಂಗ ಮಕ್ಕಳ ನಾಟಕೋತ್ಸವದ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಇತರೆ ವಿಷಯಗಳ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಪ್ರಕಾಶ್ ರಾಜ್, ನಾನು ಕೇವಲ ಮಕ್ಕಳ ಬಗ್ಗೆ ಮಾತನಾಡಲು ಬಂದಿದ್ದೇನೆ. ಕಳ್ಳ ನನ್ಮಕ್ಕಳ ಬಗ್ಗೆ ಮಾತನಾಡಲು ಬಂದಿಲ್ಲ ಎಂದರು.
ನಟ ದರ್ಶನ್ ಅವರಿಗೆ ಜಾಮೀನು ಸಿಕ್ಕಿದೆ. ಒಂದು ದೇಶ ಒಂದು ಚುನಾವಣೆ ಬಗ್ಗೆ ಪ್ರತಿಕ್ರಿಯಿಸುವಂತೆ ಒತ್ತಾಯಿಸಿದಾಗಲೂ ನಿರಾಕರಿಸಿದರು.