ಸನಾತನ ಮತ್ತು ಹಿಂದೂ ಧರ್ಮ ರಕ್ಷಣೆಯೇ ಮೋದಿ ಗ್ಯಾರಂಟಿ : ಪ್ರಧಾನಿ ನರೇಂದ್ರ ಮೋದಿ
ಮೈಸೂರಿನಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶ
ಮೈಸೂರು : ಮೈಸೂರಿಂದ ಕರ್ನಾಟಕದ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಅದ್ಧೂರಿಯಾಗಿ ಚಾಲನೆ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಸನಾತನ ಮತ್ತು ಹಿಂದೂ ಧರ್ಮದ ರಕ್ಷಣೆಯೇ ಮೋದಿ ಗ್ಯಾರಂಟಿ ಎಂದು ಘೋಷಿಸಿದರು.
ಮಹಾರಾಜ ಕಾಲೇಜು ಮೈದಾನದಲ್ಲಿ ರವಿವಾರ ನೆರೆದಿದ್ದ ಲಕ್ಷಾಂತರ ಕಾರ್ಯಕರ್ತರು, ಬೆಂಬಲಿಗರ ಸಮ್ಮುಖದಲ್ಲಿ ಧರ್ಮ ರಕ್ಷಣೆಯ ಗ್ಯಾರಂಟಿ ಪ್ರಕಟಿಸಿದರು. ಈ ವೇಳೆ ನೆರೆದಿದ್ದ ಜನಸ್ತೋಮದಿಂದ ಹರ್ಷೋದ್ಘಾರ ವ್ಯಕ್ತವಾಯಿತು. ಮೋದಿ ಪರ ಘೋಷಣೆ ಮೊಳಗಿತು.
ಕಾಂಗ್ರೆಸ್, ಇಂಡಿಯಾ ಒಕ್ಕೂಟ ಸನಾತನ ಮತ್ತು ಹಿಂದೂ ಧರ್ಮವನ್ನು ವಿನಾಶ ಮಾಡಲು ಹೊರಟಿದ್ದಾರೆ. ಆದರೆ, ಈ ಮೋದಿ ಬದುಕಿರುವ ತನಕ ಅದು ಸಾಧ್ಯವಿಲ್ಲ. ನಿಮೆಲ್ಲರಿಗೂ ಧರ್ಮ ರಕ್ಷಣೆಯ ಗ್ಯಾರಂಟಿಯನ್ನು ನೀಡುತ್ತಿದ್ದೇನೆ ಎಂದರು.
ನೂರಾರು ವರ್ಷಗಳ ಸಮಸ್ತ ಹಿಂದೂಗಳ ಕನಸ್ಸಾಗಿದ್ದ ರಾಮ ಮಂದಿರ ನಿರ್ಮಾಣ ಮಾಡಿ ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ್ದೇವೆ. ಇದು ಮೋದಿ ಗ್ಯಾರಂಟಿಯಲ್ಲವೇ? ಎಂದು ಪ್ರಶ್ನಿಸಿದ ಅವರು, ಅರ್ಟಿಕಲ್ 370 ರದ್ದು, ಮಹಿಳೆಯರ ರಕ್ಷಣೆಗೆ ಕ್ರಮ ಕೈಗೊಂಡಿದ್ದೇವೆ. ಇದು ನೀವೆಲ್ಲರೂ ಕೊಟ್ಟ ಮತದಿಂದ ಸಾಧ್ಯವಾಗಿದೆ ಎಂದು ಹೇಳಿದರು.
ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ನರೇಂದ್ರ ಮೋದಿ ಅವರು ಮತ್ತೊಮೆ ಕಾಂಗ್ರೆಸ್ ಪಕ್ಷವನ್ನು ತುಕ್ಡೇ ತುಕ್ಡೇ ಗ್ಯಾಂಗ್ ಎಂದು ಟೀಕಿಸಿದರು. ದೇಶ ಒಡೆಯುವುದೇ ಅದರ ಉದ್ದೇಶ. ಕಾಂಗ್ರೆಸ್ ಚುನಾವಣಾ ರ್ಯಾಲಿಯಲ್ಲಿ ಭಾರತ ಮಾತ್ ಕೀ ಜೈ ಘೋಷಣೆ ಕೂಗಲು ಅನುಮತಿ ಕೇಳುವಂತಹ ಪಕ್ಷವನ್ನು ದೇಶದ ಜನತೆ ಕ್ಷಮಿಸುವುದಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ. ಸರ್ಕಾರಿ ಖಜಾನೆ ಲೂಟಿ ಮಾಡಲಾಗುತ್ತಿದೆ. ಮೋಸ ಮಾಡುವುದೇ ಅದರ ಉದ್ದೇಶವಾಗಿದ್ದು, ಕಾಂಗ್ರೆಸ್ ಪತನದ ಪರಾಕಾಷ್ಠೆ ತಲುಪಿದೆ. ಅಧಿಕಾರಕ್ಕಾಗಿ ಬೆಂಕಿಯೊಂದಿಗೆ ಆಟವಾಡುತ್ತಿದೆ. ಕಾಂಗ್ರೆಸ್ ನಾಯಕ ವಿದೇಶಕ್ಕೆ ಹೋದಾಗ ದೇಶದ ಬಗ್ಗೆ ಕೆಟ್ಟದಾಗಿ ಮಾತಾಡುತ್ತಾರೆ. ಸರ್ಜಿಕಲ್ ಸ್ಟ್ರೈಕ್ ಅನ್ನು ಟೀಕಿಸುತ್ತಾರೆ. ಆದರೆ, ವಿಶ್ವದಲ್ಲಿ ಭಾರತದ ಸ್ಥಾನಮಾನ ಹೆಚ್ಚಿದೆ. ಭಾರತದತ್ತ ವಿದೇಶಿಗರು ಗರ್ವದಿಂದ ನೋಡುತ್ತಿದ್ದಾರೆ ಎಂದು ನುಡಿದರು.
ಅಭ್ಯರ್ಥಿಗಳಾದ ಯದುವೀರ್, ಎಚ್.ಡಿ. ಕುಮಾರಸ್ವಾಮಿ, ಎಸ್.ಬಾಲರಾಜ್, ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದ ಅವರು, ಮತ್ತೊಮೆ ಅವಕಾಶ ನೀಡುವಂತೆ ಮನವಿ ಮಾಡಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್. ಅಶೋಕ್, ಸಂಸದರಾದ ಸುಮಲತಾ ಅಂಬರೀಶ್, ಪ್ರತಾಪಸಿಂಹ, ಶಾಸಕರಾದ ಜಿ.ಟಿ. ದೇವೇಗೌಡ, ಎಚ್.ಡಿ. ರೇವಣ್ಣ, ಜಿ.ಡಿ. ಹರೀಶ್‌ಗೌಡ, ಟಿ.ಎಸ್. ಶ್ರೀವತ್ಸ, ಎಚ್.ಕೆ.ಸುರೇಶ್, ಮಾಜಿ ಸಚಿವರಾದ ಸಿ.ಟಿ. ರವಿ, ಪ್ರೀತಂಗೌಡ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಎನ್. ಮಹೇಶ್, ಎಸ್.ಎ. ರಾಮದಾಸ್ ಮುಂತಾದವರಿದ್ದರು.