ಪ್ರತಿಭಟನೆ, ಜಾಥಾ ಕರೆ ಹಿನ್ನೆಲೆ: ಉದಯಗಿರಿಯಲ್ಲಿ ನಿಷೇಧಾಜ್ಞೆ, ಬಿಗಿ ಬಂದೋಬಸ್ತ್
ಮೈಸೂರಿಗೆ ಆಗಮಿಸಿರುವ ಬಿ.ವೈ.ವಿಜಯೇಂದ್ರ, ಆರ್.ಅಶೋಕ್

ಮೈಸೂರು: ಉದಯಗಿರಿ ಪೊಲೀಸ್ ಠಾಣಾ ಆವರಣದಲ್ಲಿ ಇತ್ತೀಚೆಗೆ ನಡೆದ ಕಲ್ಲು ತೂರಾಟ ಪ್ರಕರಣ ಖಂಡಿಸಿ ರಾಷ್ಟ್ರ ಸುರಕ್ಷ ಜನಾಂದೋಲನ ಸಮಿತಿ ಕರೆ ನೀಡಿದ್ದ ಜನಜಾಗೃತಿ ರ್ಯಾಲಿಗೆ ಪೊಲೀಸರು ಅನುಮತಿ ನಿರಾಕರಿಸಿರುವ ಬೆನ್ನಲ್ಲೆ ರ್ಯಾಲಿ ಮಾಡುವುದಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೈಸೂರು ನಗರಕ್ಕೆ ಆಗಮಿಸಿದ್ದಾರೆ. ರ್ಯಾಲಿಗೆ ಅವಕಾಶ ನಿರಾಕರಿಸಿರುವ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಮೈಸೂರು ನಗರದ ಗನ್ ಹೌಸ್ ಬಳಿಯ ಜೆ.ಎಸ್.ಎಸ್. ಮಹಾವಿದ್ಯಾಪೀಠದಿಂದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದವರಗೆ 'ಮೈಸೂರು ಚಲೋ' ನಡೆಸುವುದಾಗಿ ರಾಷ್ಟ್ರ ಸುರಕ್ಷ ಜನಾಂದೋಲನ ಸಮಿತಿ ಘೋಷಣೆ ಮಾಡಿತ್ತು. ಇದರ ಜೊತೆಗೆ ಗಾಂಧಿನಗರದ ದಲಿತ ಮಹಾಸಭಾ ಮತ್ತು ಯುವ ಕಾಂಗ್ರೆಸ್ ಸಮಿತಿಯವರು ಪ್ರತಿ ಸಮಾವೇಶ ನಡೆಸಲು ಮುಂದಾಗಿದ್ದರು. ಪರಿಸ್ಥಿತಿ ಅರಿತ ನಗರ ಪೊಲೀಸ್ ಅಯುಕ್ತೆ ಸೀಮಾ ಲಾಟ್ಕರ್ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಒಂದು ದಿನ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದರು. ಆದರೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರ್ಯಾಲಿ ಮಾಡಿಯೇ ಸಿದ್ಧ ಎಂದು ಘೋಷಣೆ ಮಾಡಿದ್ದರು. ಇಂದು ಬೆಳಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಬಿ.ವೈ.ವಿಜಯೇಂದ್ರ ಮೈಸೂರು ನಗರಕ್ಕೆ ಆಗಮಿಸಿದ್ದರಾದರೂ ಮೈಸೂರು ಚಲೋ ನಡೆಸಲು ಮುಂದಾಗಿಲ್ಲ.
ರಾಜ್ತ ಹೈಕೋರ್ಟ್ ಅನುಮತಿ ಪಡೆದು ಪ್ರತಿಭಟನೆ ಮಾಡುವುದಾಗಿ ಸಮಿತಿ ಮುಖಂಡರು ಹೇಳುತ್ತಿದ್ದಾರೆ. ಪೊಲೀಸರು ಗನ್ ಹೌಸ್ ವೃತ್ತ ಮತ್ತು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಕಟ್ಟೆಚ್ಚರ ವಹಿಸಿದ್ದಾರೆ.
ಕುಮಾರಸ್ವಾಮಿ ಭೇಟಿ ಮಾಡಿದ ಆರ್.ಅಶೋಕ್:
ಮೈಸೂರಿಗೆ ಆಗಮಿಸಿರುವ ವಿರೋಧ ಪಕ್ಷದ ನಾಯಕ ಆರ್.ಆಶೋಕ್, ಸರಕಾರಿ ಅತಿಥಿಗೃಹದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಪ್ರತಿಭಟನೆ ಸಂಬಂಧ ಮಾತುಕತೆ ನಡೆಸಿದರು.
ಸರ್ಕಾರಿ ಅತಿಥಿಗೃಹದಲ್ಲಿ ಆರ್.ಅಶೋಕ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ ಇದ್ದರೆ. ಖಾಸಗಿ ಹೋಟೆಲ್ ನಲ್ಲಿ ಬಿ.ವೈ.ವಿಜಯದ್ರ ಇದ್ದಾರೆ ಎಂದು ತಿಳಿದು ಬಂದಿದೆ.