ರಾಜಿನಾಮೆ ನೀಡಿ ನನ್ನ ವಿರುದ್ಧ ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿ : ಸಿಎಂ ಸಿದ್ದರಾಮಯ್ಯಗೆ ಜಿ.ಟಿ.ದೇವೇಗೌಡ ಸವಾಲು
ಸಿದ್ದರಾಮಯ್ಯ/ಜಿ.ಟಿ.ದೇವೇಗೌಡ
ಮೈಸೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿವೃದ್ಧಿ ಮಾಡದೆಯೇ ರಾಜಕೀಯದಲ್ಲಿ ಬೆಳೆದು ಬಂದಿದ್ದಾರೆ. ಅವರು ವರುಣಾ ಕ್ಷೇತ್ರಕ್ಕೆ ರಾಜೀನಾಮೆ ಕೊಡಲಿ, ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ರಾಜೀನಾಮೆ ಕೊಡುತ್ತೇನೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇಬ್ಬರು ಒಟ್ಟಿಗೆ ಚುನಾವಣೆಗೆ ನಿಲ್ಲೋಣ ಯಾರು ಗೆಲ್ಲುತ್ತಾರೆ ನೋಡೋಣ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸವಾಲು ಹಾಕಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಶಾಸಕ ಜಿ.ಟಿ.ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದಿಂದ ಮೂರು ಬಾರಿ ಗೆದ್ದಿದ್ದಾನೆ. ಅವನು ಏನು ಕಟ್ಟೆ ಹಾಕಿದ್ದಾನೆ ಹೇಳಿ ಎಂಬ ಹೇಳಿಕೆಗೆ ಅವರು ಇಂದು ತಿರುಗೇಟು ನೀಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಅಭಿವೃದ್ಧಿ ಅಂದರೆ ಏನೂ ಅಂತ ಗೊತ್ತಿಲ್ಲ. ಸಿದ್ದರಾಮಯ್ಯ ಅಭಿವೃದ್ಧಿ ಮಾಡದೆಯೇ ರಾಜಕೀಯದಲ್ಲಿ ಬೆಳೆದು ಬಂದಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀವು ಮಾಡಿದ ಅಭಿವೃದ್ಧಿ ಕಾರ್ಯದ ಶ್ವೇತ ಪತ್ರ ಹೊರಡಿಸಿ ಎಂದು ಆಗ್ರಹಿಸಿದರು.
2006ರಲ್ಲಿ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಮೇಲಿನ ಮುನಿಸಿನಿಂದ ನಾನು ಜೆಡಿಎಸ್ ಪರ ಪ್ರಚಾರಕ್ಕೆ ಹೋಗಲಿಲ್ಲ. ಹಾಗಾಗಿ ನೀವು ಕೇವಲ 200 ಮತಗಳಿಂದ ಗೆದ್ದಿರಿ. ನನ್ನನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಬೇಕು ಎಂದು ಎಷ್ಟು ಸಲ ಪ್ರಯತ್ನಪಟ್ಟಿದ್ದೀರಿ. ನನ್ನ ಕಾಯೋಕೆ ದೈವವಿದೆ, ಧರ್ಮವಿದೆ. ನೀವು ಚಾಮುಮಢೇಶ್ವರಿ ಕ್ಷೇತ್ರದಲ್ಲಿ ಸೋತ ಮೇಲೆ ಮುಗಿದಿ ಹೋಯಿತು. ನಾನು ನಿಮ್ಮ ವಿರುದ್ಧ ಮಾತನಾಡಿದ್ದೇನೆಯೇ? ಯಾಕೆ ಪದೇ ಪದೇ ನನ್ನ ವಿರುದ್ಧ ಮಾತನಾಡುತ್ತೀರಿ ಎಂದು ಪ್ರಶ್ನಿಸಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಹಶೀಲ್ದಾರ್, ಬಿಇಒ ಎಲ್ಲಾ ಮುಖ್ಯಮಂತ್ರಿಗಳ ಬಂಧುಗಳು. ಎಷ್ಟು ದಿನ ಮುಖ್ಯಮಂತ್ರಿಗಳಾಗಿರುತ್ತೀರಿ ನೋಡೋಣ. ನನಗೆ ಎಷ್ಟು ನೋವು ಕೊಡುತ್ತೀರಿ?. ಪದೇ ಪದೇ ಬಂದು ಯಾಕೆ ಈ ರೀತಿ ಚುಚ್ಚಿ ಮಾತನಾಡುತ್ತೀರಿ?. 35 ಸಾವಿರ ಮತಗಳ ಅಂತರದಿಂದ ನಾನು ನಿಮ್ಮನ್ನು ಸೋಲಿಸಿದಾಗಲೂ ನಿಮ್ಮ ಬಗ್ಗೆ ಅಗೌರವದಿಂದ ಮಾತನಾಡಲಿಲ್ಲ. ಹೆಸರಿಗೆ ಮಾತ್ರ ನಾನು ಶಾಸಕ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎಲ್ಲಾ ನಿಮ್ಮದೇ ಎಂದು ಬೇಸರ ವ್ಯಕ್ತಪಡಿಸಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಪಿಡಿಓಗಳು ಇವರಿಗೆ ಬೇಕಾದವರು. ಇವರ ಪುತ್ರ ಯತೀಂದ್ರ ನಮ್ಮಕ್ಷೇತ್ರದಲ್ಲಿ ಕಮೀಷನ್ ದಂಧೆ ಮಾಡುತ್ತಿದ್ದಾರೆ. ಗುತ್ತಿಗೆದಾರರು ಕಮೀಷನ್ ಅನ್ನು ನಿಮ್ಮ ಪುತ್ರನಿಗೆ ಕೊಡಬೇಕು.ವರುಣಾದಲ್ಲಿ ನಿಮ್ಮ ಸಾಮರ್ಥ್ಯ ಅಭಿವೃದ್ಧಿಯಿಂದ ಗೆದ್ದರೆ? ಬಿಜೆಪಿಯ ದೊಡ್ಡವರ ಬೆಂಬಲ ಪಡೆದು ಗೆದ್ದಿದ್ದಲ್ಲವೇ? ಎಂದು ಆರೋಪಿಸಿದರು.