ಬ್ರಾಹ್ಮಣ, ಬಂಡವಾಳ ಶಾಹಿಗಳ ವಿರುದ್ಧ ಭೀಮಾ ಕೋರೆಗಾಂವ್ ಮಾದರಿಯ ಹೋರಾಟ ಅನಿವಾರ್ಯ: ಶಿವಸುಂದರ್
ಮೈಸೂರಿನಲ್ಲಿ ಭೀಮಾ ಕೋರೆಗಾಂವ್ 207ನೇ ವಿಜಯೋತ್ಸವ ಆಚರಣೆ
ಮೈಸೂರು : ಪೇಶ್ವೆಗಳ ವಿರುದ್ಧ ಮಹಾರ್ ಸೈನಿಕರು ಯುದ್ಧ ಮಾಡಿ ಭೀಮಾ ಕೋರೆಂಗಾವ್ ವಿಜಯೋತ್ಸವ ಆಚರಿಸಿದರು. ಇಂದು ನವ ಬ್ರಾಹ್ಮಣ ಶಾಹಿ, ನವ ಬಂಡವಾಳ ಶಾಹಿಗಳ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಚಿಂತಕ ಶಿವಸುಂದರ್ ಹೇಳಿದ್ದಾರೆ.
ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿ, ಜೈ ಭೀಮ್ ಸ್ಪೋರ್ಟ್ಸ್ ಕ್ಲಬ್, ಡ್ರೀಮ್ ಬಾಯ್ಸ್ ಸ್ಪೋರ್ಟ್ಸ್ ಕ್ಲಬ್, ವತಿಯಿಂದ ಗುರುವಾರ ನಗರದ ಅಶೋಕಪುರಂನ ಜಯನಗರ ರೈಲ್ವೆ ಗೇಟ್ ಬಳಿ ಇರುವ ಕೋರೆಗಾಂವ್ ವಿಜಯ ಸ್ಥಂಭದ ಬಳಿ ನಡೆದ ಭೀಮಾ ಕೋರೆಗಾಂವ್ 207 ನೇ ವರ್ಷದ ಸಂಭ್ರಮಾಚರಣೆ ಹಾಗೂ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ಅಂದು ಪೇಶ್ವೆಗಳ ವಿರುದ್ಧ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರಾತ್ರಿಯೆಲ್ಲಾ ಯುದ್ಧ ಮಾಡಿ ವಿಜಯ ಸಾಧಿಸಿದರು. ಆ ಯುದ್ಧ ತಮ್ಮ ಅಸ್ಮಿತೆಯ ಉಳಿವಿಗಾಗಿ ನಡೆಯಿತು. ಇಂದು ಮುಂದಿನ ಭವಿಷ್ಯದ ದೃಷ್ಟಿಯಿಂದ ಬ್ರಾಹ್ಮಣ ಶಾಹಿ ವಸಾಹತುಗಳು ಮತ್ತು ಬಂಡವಾಳ ಶಾಹಿಗಳ ಕಪಿಮುಷ್ಟಿಯಿಂದ ಹೊರಬರಲು ಮತ್ತೊಂದು ಕೋರೆಗಾಂವ್ ಮಾದರಿಯ ಹೋರಾಟ ಅಗತ್ಯವಾಗಿದೆ ಎಂದು ಹೇಳಿದರು.
ಕೋರೆಂಗಾವ್ ಯುದ್ಧದ ನಂತರ ವಸಾಹತು ಶಾಹಿಗಳು ದಲಿತರು, ದಮನಿತರ ವಿರುದ್ಧ ಸಂಚನ್ನು ರೂಪಿಸಿದ್ದರು. ಆ ಸಂಚನ್ನು ತಿಳಿದೇ ಅಂಬೇಡ್ಕರ್ ಅವರು ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವದ ಸಂದೇಶ ಸಾರಿದ್ದರು ಎಂದು ಹೇಳಿದರು.
ದಲಿತರ ಬಗ್ಗೆ ಅಪಾರ ಕಾಳಜಿ, ನಾವೇ ಸಂವಿಧಾನ ರಕ್ಷಕರು ಎಂಬಂತೆ ಬಿಜೆಪಿಯವರು ಬಿಂಬಿಸುತ್ತಿದ್ದಾರೆ. ಕಾಂಗ್ರೆಸ್ ನವರು ಸಂವಿಧಾನ ವಿರೋಧಿಗಳು ಅಂಬೇಡ್ಕರ್ ಅವರನ್ನು ಸೋಲಿಸಿದರು ಎಂಬೆಲ್ಲಾ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ನವರು ಸಂವಿಧಾನವನ್ನು ಸೋಲಿಸಿದರೆ, ಬಿಜೆಪಿಯವರು ಸಂವಿಧಾನವನ್ನು ಸಾಯಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿದ್ವಾಂಸ ಡಾ.ರಹಮತ್ ತರೀಕೆರೆ, ಇಂದು ದೇಶದಲ್ಲಿ ದಲಿತರು, ಮಹಿಳೆಯರು ಮತ್ತು ಮುಸ್ಲಿಮರು ದಮನಿಸಲ್ಪಡುತ್ತಿದ್ದಾರೆ. ಆಹಾರ, ವಸ್ತ್ರ ಮತ್ತಿತರ ವಿಚಾರವಾಗಿ ಅವರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ಮೂರು ವರ್ಗವು ಒಂದು ರಾಜಕೀಯ ಶಕ್ತಿಯಾಗಿ ರೂಪಗೊಳ್ಳಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭೋದಿ ದತ್ತ ಬಂತೇಜಿ, ಮಾಜಿ ಮೇಯರ್ ಪುರುಷೋತ್ತಮ್, ರಂಗಕರ್ಮಿ ಜನಾರ್ಧನ್ (ಜನ್ನಿ), ಐಜಿಪಿ ಆಪ್ತ ಸಹಾಯಕ ಮಹೇಶ್, ಲೇಖಕ ಎಚ್.ಚನ್ನಪ್ಪ ಹನೂರು, ಮಾಜಿ ಎಪಿಎಂಸಿ ಉಪಾಧ್ಯಕ್ಷ ಅಹಿಂದ ಜವರಪ್ಪ, ಆದಿಕರ್ನಾಟಕ ಮಹಾಸಂಸ್ಥಾನದ ಅಧ್ಯಕ್ಷ ಸುನೀಲ್, ಜಯರಾಜ್ ಹೆಗಡೆ, ಜೋಗಿ ಮಹೇಶ್, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.