ಬಿಜೆಪಿ ಸಂವಿಧಾನ, ಅಂಬೇಡ್ಕರ್ ಅವರನ್ನು ಸಾಯಿಸುತ್ತಿದೆ: ಚಿಂತಕ ಶಿವಸುಂದರ್
ʼಸಂವಿಧಾನ ವರ್ಸಸ್ ಸಂಘಿಗಳ ಸುಳ್ಳು ಅಭಿಯಾನʼ ಪುಸ್ತಕ ಬಿಡುಗಡೆ

ಮೈಸೂರು : ಬಿಜೆಪಿಯು ಸಂವಿಧಾನ ಮತ್ತು ಅಂಬೇಡ್ಕರ್ ಅವರನ್ನು ಸಾಯಿಸುತ್ತಿದೆ. ಸಂವಿಧಾನ ಅನುಷ್ಠಾನ ವಿಚಾರದಲ್ಲಿ ಕಾಂಗ್ರೆಸ್ ತಪ್ಪು ಮಾಡಿದೆ, ಆದರೆ ಸಂಘ ಪರಿವಾರ ಪ್ರಮಾದವೇ ಎಸಗುತ್ತಿದೆ ಎಂದು ಚಿಂತಕ ಶಿವಸುಂದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಅಶೋಕಪುರಂ ಬಳಿಯ ಬಲ್ಲಾಳ್ ವೃತ್ತದಲ್ಲಿರುವ ವಿಶ್ವಮೈತ್ರಿ ಬುದ್ಧವಿಹಾರದಲ್ಲಿ ಮಂಗಳವಾರ ನಡೆದ 76ನೇ ವರ್ಷದ ಸಂವಿಧಾನ ದಿನಾಚರಣೆ ಪ್ರಯುಕ್ತ ತಮ್ಮ ರಚನೆಯ ‘ಸಂವಿಧಾನ ವರ್ಸಸ್ ಸಂಘಿಗಳ ಸುಳ್ಳು ಅಭಿಯಾನʼ ಪುಸ್ತಕ ಬಿಡುಗಡೆಯಲ್ಲಿ ಮಾತನಾಡಿದ ಅವರು, 3ನೇ ಬಾರಿ ಅಧಿಕಾರಕ್ಕೆ ಬಂದರೆ ಅಧಿಕೃತವಾಗಿ ಹಿಂದೂ ರಾಷ್ಟ್ರ ಮಾಡುತ್ತೇವೆ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದರು. ಆದರೆ ಉತ್ತರ ಭಾರತದ ತಳ ಸಮುದಾಯದವರು ಇದಕ್ಕೆ ಅವಕಾಶ ಕೊಡಲಿಲ್ಲ ಎಂದರು.
ಹಿಂದೂ ರಾಷ್ಟ್ರ ಎನ್ನುವುದು ಈ ದೇಶದಲ್ಲಿ ವಾಸ್ತವವಾದರೆ ಅದಕ್ಕಿಂತ ದೊಡ್ಡ ಅಪಾಯ ಮತ್ತೊಂದಿಲ್ಲ. ಇಲ್ಲಿನ ಸಮಾನತೆ, ಸಹೋದರತ್ವ ನಾಶ ಮಾಡುವ ಈ ಪರಿಕಲ್ಪನೆಯನ್ನು ಶತಾಯ ಗತಾಯ ತಪ್ಪಿಸಬೇಕು ಎಂದು ಅಂಬೇಡ್ಕರ್ ಕರೆ ನೀಡಿದ್ದರು. ಆರೆಸ್ಸೆಸ್‌ನ ಸರ ಸಂಘಚಾಲಕ ಮೋಹನ್ ಭಾಗವತ್ ಅವರು ದೇಶಕ್ಕೆ ಸ್ವಾತಂತ್ರ್ಯ ಬಂದದ್ದು ಬಾಬರಿ ಮಸೀದಿ ಕೆಡವಿದ ಸ್ಥಳದಲ್ಲಿ ರಾಮಮಂದಿರ ಸ್ಥಾಪನೆಯಾದ 2024ರ ಜ.22ರಂದು ಎಂದಿದ್ದಾರೆ ಎಂದರು.
ರಾಜ್ಯದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮಾತನಾಡಿ, ನಮ್ಮ ಎಲ್ಲ ಕಾನೂನುಗಳ ಪ್ರೇರಣೆ ಸಂವಿಧಾನವಲ್ಲ ಧರ್ಮ ಎನ್ನುತ್ತಾರೆ, ಮುಂದುವರಿದು ಮನುಸ್ಮತಿಯು ಈ ಸಮಾಜಕ್ಕೆ ಆಚಾರ, ವ್ಯವಹಾರ, ಪ್ರಾಯಶ್ಚಿತ್ತತೆ ತಿಳಿಸಿದ ಪೀನಲ್ ಕೋಡ್ ಎಂಬಂತೆ ಹೇಳಿದ್ದಾರೆ. ಈ ಮಾತುಗಳೆಲ್ಲಾ ಸಂವಿಧಾನದ ಮಾರ್ಗವೇ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಹುಣಸೂರಿನ ಡಿ.ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಚಿದಾನಂದ ಮಾತನಾಡಿ, ‘ಬಂಡವಾಳಶಾಹಿ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಆಧಿಪತ್ಯ ಸಮಾಜವನ್ನು ನಿಯಂತ್ರಿಸುತ್ತಿದೆ. ನಮ್ಮ ಸಂಸ್ಕೃತಿ, ಜೀವನ ದೃಷ್ಟಿಕೋನದಲ್ಲಿ ಬದಲಾವಣೆ ತರದ ಹೊರತು ಬಾಬ ಸಾಹೇಬರು ನೀಡಿದ ಸಾಂವಿಧಾನಿಕ ಹಕ್ಕನ್ನು ಅನುಭವಿಸಲು ಸಾಧ್ಯವಿಲ್ಲ ಎಂದರು.
ಅಶೋಕಪುರಂನ ಜ್ಞಾನ ಸ್ವರೂಪಾನಂದ ಮಠದ ಜ್ಞಾನಸ್ವರೂಪಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಮಾಜಿ ಮೇಯರ್ ವಿ.ಪುರುಷೋತ್ತಮ್ ಅಧ್ಯಕ್ಷತೆ ವಹಿಸಿದ್ದರು.