ಉಸ್ತುವಾರಿ ಸಚಿವನಾಗಿದ್ದಾಗಲೇ ಮುಡಾ ಅವ್ಯವಹಾರ ನನ್ನ ಗಮನಕ್ಕೆ ಬಂದಿತ್ತು : ಎಸ್.ಟಿ.ಸೋಮಶೇಖರ್
ಮೈಸೂರು : ನಾನು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಮುಡಾ ಅವ್ಯವಹಾರ ವಿಚಾರ ನನ್ನ ಗಮನಕ್ಕೆ ಬಂದಿತ್ತು. ಅಲ್ಲದೆ, ಆಯುಕ್ತರನ್ನು ಬದಲಾಯಿಸುವಂತೆ ಅಂದಿನ ಸರಕಾರಕ್ಕೆ ಹೇಳಿದ್ದೆ. ಆದರೆ, ಜಾತಿಯ ಪ್ರಭಾವದಿಂದ ಅವರು ಉಳಿಯುವ ರೀತಿ ಆಯಿತು ಎಂದು ಬಿಜೆಪಿ ಶಾಸಕ, ಮಾಜಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ಮೈಸೂರಿನಲ್ಲಿ ಮುಡಾ ಭ್ರಷ್ಟಾಚಾರದ ಕುರಿತು ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆಯುಕ್ತರು ಸಭೆ ಮಾಡದೆಯೇ ನಿವೇಶನಗಳನ್ನು ನೀಡಿದ್ದಾರೆ. 50:50 ಅನುಪಾತದಡಿ ನಿವೇಶನ ಕೊಡುವಾಗ ಸಭೆಯಲ್ಲಿ ಚರ್ಚೆ ಮಾಡಿ ಬಳಿಕ ಕೊಡಬೇಕು. ಇದು ಯಾವ ರೂಲ್ಸ್ ಗಳನ್ನು ಅಂದಿನ ಆಯುಕ್ತರು ಫಾಲೋ ಮಾಡಲಿಲ್ಲ. ಹೀಗಾಗಿ, ಆಯುಕ್ತರನ್ನ ಬದಲಾಯಿಸುವಂತೆ ಅಂದಿನ ಸರಕಾರಕ್ಕೆ ಹೇಳಿದ್ದೆ. ಆದರೆ, ಜಾತಿಯ ಪ್ರಭಾವದಿಂದ ಅವರು ಉಳಿಯುವ ರೀತಿ ಆಯಿತು. ಅಂದೇ ಸರಿಯಾದ ಕ್ರಮ ಆಗಿದ್ದರೆ ಇವತ್ತು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿರಲಿಲ್ಲ" ಎಂದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ :
ನನ್ನ ಹೆಸರಿನಲ್ಲಿ ಅಥವಾ ಬೇನಾಮಿ ಹೆಸರಿನಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಒಂದೇ ಒಂದು ನಿವೇಶನ ಇದ್ದರೇ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಎಸ್.ಟಿ.ಸೋಮಶೇಖರ್ ಸವಾಲು ಹಾಕಿದರು.
ನಾನು ನಿವೇಶನ ತೆಗದುಕೊಂಡಿಲ್ಲ. ಯಾರಿಗೂ ನಾನು ಒತ್ತಡ ಹೇರಿ ನಿವೇಶನ ಕೊಡಿಸಿಲ್ಲ. ಅನಗತ್ಯವಾಗಿ ಈ ವಿಚಾರದಲ್ಲಿ ನನ್ನ ಹೆಸರು ತರಬೇಡಿ ಎಂದು ಸ್ಪಷ್ಟಪಡಿಸಿದರು.