ಈ ದೇಶದ ನಿಜವಾದ ನಿರ್ಮಾತೃಗಳು ಉದ್ಯಮಿಗಳು, ರಾಜಕಾರಣಿಗಳಲ್ಲ: ನಾರಾಯಣ ಮೂರ್ತಿ
"ಸರ್ಕಾರಗಳು ಉದ್ಯೋಗ ಸೃಷ್ಟಿಸುವ ಉದ್ಯಮಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕು"
ಮೈಸೂರು : ಸರ್ಕಾರಗಳು ನೇರವಾಗಿ ಉದ್ಯೋಗ ನೀಡುವುದಲ್ಲ, ಉದ್ಯೋಗ ಸೃಷ್ಟಿಸುವ ಉದ್ಯಮಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಹೇಳಿದರು.
ಬೇರುಂಢ ಫೌಂಡೇಶನ್ ವತಿಯಿಂದ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ಮೈಸೂರು ಉದ್ಯಮಗಳ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು.
'ಆರ್ಥಿಕತೆ ನಿರ್ಮಾಣದಲ್ಲಿ ಸರ್ಕಾರದ ಪಾಲ್ಗೊಳ್ಳುವಿಕೆ ಕಡಿಮೆ ಇದ್ದಷ್ಟು ಫಲಿತಾಂಶ ಉತ್ತಮವಾಗಿರುತ್ತದೆ. ಸರ್ಕಾರಗಳು ಉದ್ಯೋಗ ಹಾಗೂ ಸಂಪತ್ತಿನ ಸೃಷ್ಟಿಗೆ ಪೂರಕವಾದ ನಿಯಮಗಳನ್ನು ರೂಪಿಸಬೇಕು. ಅದರಿಂದ ಸಂಗ್ರಹವಾಗುವ ತೆರಿಗೆಯನ್ನು ದೇಶದ ಅಭಿವೃದ್ಧಿಗೆ ವಿನಿಯೋಗಿಸಬೇಕು' ಎಂದು ಸಲಹೆ ನೀಡಿದರು.
'ಗರಿಬಿ ಹಠಾವೋ ಅಂತಹ ಘೋಷಣೆಗಳು ಕೇವಲ ಹೇಳಿಕೆಗಳಿಗೆ ಸೀಮಿತವಷ್ಟೇ. ಉದ್ಯೋಗ ನೀಡುವುದರಿಂದ ಅಭಿವೃದ್ಧಿ ಆಗುತ್ತದೆಯೇ ಹೊರತು ಉಚಿತವಾಗಿ ಹಣ ಹಂಚುವುದರಿಂದ ಅಲ್ಲ. ಉದ್ಯಮಗಳು ಬೆಳೆದು ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾದಾಗ ಮಾತ್ರ ಬಡತನ ನಿರ್ಮೂಲನೆ ಸಾಧ್ಯ. ರಾಜಕಾರಣಿಗಳು, ಅಧಿಕಾರಿಗಳು ಈ ದೇಶದ ನಿರ್ಮಾತೃಗಳಲ್ಲ. ಉದ್ಯಮಿಗಳು ನಿಜವಾದ ನಿರ್ಮಾತೃಗಳು. ಬಡ ರೈತ, ಕಾರ್ಮಿಕರಿಗೆ ಶಕ್ತಿ ತುಂಬುವ ಸಾಮರ್ಥ್ಯ ಇರುವುದು ಅವರಿಗೆ ಮಾತ್ರ ಎಂದರು.
ಇಂದಿಗೂ 80 ಕೋಟಿ ಜನರಿಗೆ ಉಚಿತ ಪಡಿತರ ನೀಡುತ್ತಿರುವ ಭಾರತದಂತಹ ಒಂದೇ ಆರ್ಥಿಕತೆಯನ್ನು ನೆಚ್ಚಿ ಕೂರಬೇಡಿ. ಜಾಗತಿಕ ಮಾರುಕಟ್ಟೆಗೆ ತಕ್ಕಂತೆ ನಿಮ್ಮ ಯೋಜನೆಗಳನ್ನು ರೂಪಿಸಿ. ಸುಸ್ಥಿರ, ಜಾಗತಿಕ ದರ್ಜೆಯ ಗುಣಮಟ್ಟದ ಉದ್ಯಮ ನಿಮ್ಮ ಆದ್ಯತೆಯಾಗಲಿ' ಎಂದು ಉದ್ಯಮಿಗಳಿಗೆ ಕಿವಿಮಾತು ಹೇಳಿದರು.
ಸಮಾಜದಲ್ಲಿನ ಬಡತನ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಅಸಮಾನತೆ ತೊಡೆದುಹಾಕಲು ಶ್ರಮಿಸುವುದು ಉದ್ಯಮಿಗಳ ಕರ್ತವ್ಯ. ಕಟ್ಟಕಡೆಯ ಹಳ್ಳಿಯ ಬಡ ಮಗುವಿನ ಜೀವನಮಟ್ಟ ಸುಧಾರಣೆ ನಮ್ಮ ಹೊಣೆ ಎಂದು ಆಶಿಸಿದರು.
ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜವಂಶಸ್ಥೆ ತ್ರಿಷಿಕಾ ಒಡೆಯರ್ ಇದ್ದರು.