ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಸತ್ಯಾಸತ್ಯತೆಯನ್ನು ಪೊಲೀಸರೇ ಬಯಲಿಗೆ ಎಳೆಯಲಿದ್ದಾರೆ: ಸಿದ್ದರಾಮಯ್ಯ
ಸಿಬಿಐಯನ್ನು ಟೀಕಿಸುತ್ತಿದ್ದ ಬಿಜೆಪಿ, ಜೆಡಿಎಸ್ ಗೆ ಈಗ ಅಭಿಮಾನ ಬಂದು ಬಿಟ್ಟಿದೆ: ಸಿಎಂ ವಾಗ್ದಾಳಿ
ಮೈಸೂರು, ಮೇ 10: ಸಿಬಿಐ ಬಗ್ಗೆ ನಂಬಿಕೆ ಇಲ್ಲದೆ ಟೀಕೆ ಮಾಡುತ್ತಿದ್ದ ಬಿಜೆಪಿ ಮತ್ತು ಜೆಡಿಎಸ್ ನವರಿಗೆ ಈಗ ಸಿಬಿಐ ಮೇಲೆ ಅಭಿಮಾನ ಬಂದು ಬಿಟ್ಟಿದೆ. ಹಾಗಾಗಿ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣವನ್ನು ಸಿಬಿಐಗೆ ವಹಿಸಿ ಎನ್ನುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈತ್ರಿ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸಿಬಿಐ ಅನ್ನು 'ಕರಪ್ಷನ್ ಬ್ಯೂರೋ ಆಫ್ ಇನ್ ವೆಸ್ಟಿಗೇಷನ್' ಅನ್ನುತ್ತಿದ್ದರು. ಇದೇ ಎಚ್.ಡಿ.ದೇವೇಗೌಡರು 'ಚೋರ್ ಬಚಾವೋ ಸಂಸ್ಥೆ' ಅನ್ನುತ್ತಿದ್ದರು. ಈಗ ಅವರಿಗೆ ಸಿಬಿಐ ಮೇಲೆ ನಂಬಿಕೆ ಬಂದು ಬಿಟ್ಟಿದೆ ಎಂದು ವ್ಯಂಗ್ಯವಾಡಿದರು.
ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣ ಕುರಿತು ತನಿಖೆ ಮಾಡಲು ಈಗಾಗಲೆ ಎಸ್.ಐ.ಟಿ.ಗೆ ವಹಿಸಿದ್ದೇವೆ. ನಮ್ಮ ಪೊಲೀಸರ ಬಗ್ಗೆ ನನಗೆ ನಂಬಿಕೆ ವಿಶ್ವಾಸ ಇದ್ದು, ಅವರು ಕಾನೂನು ಪ್ರಕಾರ ತನಿಖೆ ಮಾಡಿ ಸತ್ಯಾಸತ್ಯತೆಯನ್ನು ಬಯಲಿಗೆ ಎಳೆಯಲಿದ್ದಾರೆ ಎಂದು ಹೇಳಿದರು.
ನಮ್ಮ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಡಿ.ಕೆ.ರವಿ, ಕೆ.ಜೆ.ಜಾರ್ಜ್, ಮತ್ತು ಪರೇಶ್ ಮೇಸ್ತಾ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದೆವು. ಅದು ಏನಾಯಿತು? ಬಿಜೆಪಿಯವರು ಅಧಿಕಾರದಲ್ಲಿದ್ದ ಅವಧಿಯಲ್ಲಿ ಒಂದೇ ಒಂದು ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದಾರ ಎಂದು ಪ್ರಶ್ನಿಸಿದರು.
ಪ್ರಜ್ವಲ್ ರೇವಣ್ಣ ಪ್ರಕರಣದ ಎಸ್.ಐ.ಟಿ ತನುಖೆಯಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡುವುದಿಲ್ಲ. ನಾನು ಈ ಹಿಂದೆಯೂ ಯಾವುದೇ ತನಿಖಾ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿಲ್ಲ, ಮುಂದೆಯೂ ಪ್ರವೇಶಿಸುವುದಿಲ್ಲ. ನಮ್ಮ ಪೊಲೀಸ್ ನವರಿಗೆ ಕಾನೂನು ಪ್ರಕಾರ ತನಿಖೆ ಮಾಡಿ ವರದಿ ಕೊಡುವಂತೆ ಸೂಚಿಸಿದ್ದೇನೆ. ಆ ಪ್ರಕಾರ ಅವರು ತನಿಖೆ ಮಾಡಿ ವರದಿ ಕೊಡುತ್ತಾರೆ ಎಂದು ಹೇಳಿದರು.
ರಾಜ್ಯದ ಬೇರೆ ಬೇರೆ ಪ್ರಕರಣವನ್ನು ತನಿಖೆ ಮಾಡುವವರು ಯಾರು ನಮ್ಮ ಪೊಲೀಸ್ ನವರಲ್ಲವೇ, ಹಾಗಿದ್ದ ಮೇಲೆ ಬಿಜೆಪಿ-ಜೆಡಿಎಸ್ ನವರಿಗೆ ನಮ್ಮ ಪೊಲೀಸರ ಬಗ್ಗೆ ನಂಬಿಕೆ ಇಲ್ಲವೆ ಎಂದು ಪ್ರಶ್ನಿಸಿದರು.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಆಗಲಿ, ನಾನಾಗಲಿ ಅಥವಾ ಇನ್ನಾರ ಒತ್ತಡವೂ ಇಲ್ಲ, ಕಾನೂನು ಪ್ರಕಾರ ಎಸ್.ಐ.ಟಿ ರಚಿಸಿದ್ದೇವೆ. ಅವರು ಸಂಪೂರ್ಣ ತನಿಖೆ ಮಾಡಿ ಸತ್ಯ ಅಸತ್ಯವನ್ನು ಪತ್ತೆ ಹಚ್ಚುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಾಸಕ ಎಚ್.ಡಿ.ರೇವಣ್ಣ ತಪ್ಪು ಮಾಡಿಲ್ಲ ಎಂದ ಮೇಲೆ ಯಾಕೆ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಅವರ ಮೇಲೆ ಸುಳ್ಳು ಎಫ್.ಐ.ಆರ್. ದಾಖಲಾಗಿದೆ ಎಂದರೆ ಅವರ ಜಾಮೀನು ಅರ್ಜಿಯನ್ನು ಯಾಕೆ ನ್ಯಾಯಾಲಯ ಮುಂದೂಡಿತು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.