ವಿಧಾನಸಭಾಧ್ಯಕ್ಷ ಸ್ಥಾನ ನನಗೆ ಹೆಚ್ಚು ಸಂತೋಷ ನೀಡಿದೆ : ಸ್ಪೀಕರ್ ಯು.ಟಿ.ಖಾದರ್
ಮಾಧ್ಯಮ ಸಂವಾದ ಕಾರ್ಯಕ್ರಮ

ಮೈಸೂರು : ರಾಜ್ಯ ವಿಧಾನಸಭೆಯ ಸ್ಪೀಕರ್ ಆಗುವ ಅವಕಾಶ ನನಗೆ ಸಿಕ್ಕಿದ್ದು, ಸಂವಿಧಾನದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ವಿಧಾನಸಭಾಧ್ಯಕ್ಷ ಸ್ಥಾನ ನನಗೆ ಹೆಚ್ಚು ಸಂತೋಷ ನೀಡಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಬುಧವಾರ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ಪೀಕರ್ ಆಗುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು. ಸ್ಪೀಕರ್ ಆಗುವ ಅವಕಾಶ ಒಮ್ಮೆ ಮಾತ್ರ ಸಿಗುವುದು ಎಂದು ಹೇಳಿದರು.
ನಾನು ಐದು ಬಾರಿ ಶಾಸಕನಾಗಿ, ಮಂತ್ರಿಯಾಗಿ ಹಲವಾರು ಇಲಾಖೆಯನ್ನು ನಿರ್ವಹಿಸಿದ್ದೇನೆ. ನನಗೆ ಸಿಕ್ಕ ಇಲಾಖೆಗಳಲ್ಲಿ ಪ್ರಾಮಾಣಿಕವಾಗಿ ಆತ್ಮತೃಪ್ತಿಯಿಂದ ಕೆಲಸ ಮಾಡಿದ್ದೇನೆ. ಸ್ಪೀಕರ್ ಆಗಿಯೂ ಹೆಚ್ಚು ಸಂತೋಷದಿಂದ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಸ್ಪೀಕರ್ ಆಗಿ ಕೆಲಸ ಮಾಡುವುದು ನಮ್ಮ ವ್ಯಕ್ತಿತ್ವ ಮತ್ತು ನಾಯಕತ್ವವನ್ನು ರೂಪಿಸುತ್ತದೆ. ಸಭಾಧ್ಯಕ್ಷರ ಸ್ಥಾನದಲ್ಲಿ ಕುಳಿತುಕೊಂಡ ಮೇಲೆ ನಾನು ಯಾವ ಪಕ್ಷದಿಂದ ಆಯ್ಕೆಯಾಗಿದ್ದೇನೊ ಅದು ಮುಖ್ಯವಾಗುವುದಿಲ್ಲ. ವಿಪಕ್ಷಗಳಿಗೆ ಮಿತ್ರನಾಗಿ ಆಡಳಿತ ಪಕ್ಷದವರಿಗೆ ಜೊತೆಯಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಪ್ರತಿಪಕ್ಷದವರು ಕೆಲವೊಮ್ಮೆ ಆಡಳಿತ ಪಕ್ಷದ ವಿರುದ್ಧ ತಿರುಗಿ ಬೀಳುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲಾ ಸಾಮಾನ್ಯ. ಆ ಸಂದರ್ಭದಲ್ಲಿ ಜವಾಬ್ದಾರಿಯುತವಾಗಿ ನಿಭಾಯಿಸಬೇಗುತ್ತದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಕೆಲವು ಬಿಲ್‌ಗಳು ಪಾಸ್ ಆಗಬೇಕಾದರೆ ಆಡಳಿತ ಪಕ್ಷದವರಿಗೆ ಸಹಕಾರ ನೀಡಬೇಕಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಪುರಸ್ಕೃತರಾದ ಮೈಸೂರು ಜಿಲ್ಲೆಯ ಪತ್ರಕರ್ತರನ್ನು ಅಭಿನಂದಿಸಲಾಯಿತು. ಮಾಧ್ಯಮ ಸಂವಾದದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಪ್ರಧಾನಕಾರ್ಯದರ್ಶಿ ಧರ್ಮಾಪುರ ನಾರಾಯಣ, ನಗರ ಉಪಾಧ್ಯಕ್ಷ ರವಿ ಪಾಂಡವಪುರ, ನಗರ ಕಾರ್ಯದರ್ಶಿ ಕೃಷ್ಣೋಜಿರಾವ್ ಉಪಸ್ಥಿತರಿದ್ದರು.
ಸಾರ್ವಜನಿಕರು ತಮ್ಮ ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸಗಳು ಮತ್ತು ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದು ಪರಿಹರಿಸಿಕೊಳ್ಳಲು ಆಗದಿದ್ದ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷರಿಗೂ ಲಿಖಿತವಾಗಿ ದೂರು ನೀಡಬಹುದು. ಅಂತಹ ದೂರುಗಳು ಬಂದಲ್ಲಿ ಸಂಬಂಧಪಟ್ಟ ಸಚಿವರು ಮತ್ತು ಶಾಸಕರಿಗೆ ಹೇಳಿ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುತ್ತೇನೆ.
-ಯು.ಟಿ.ಖಾದರ್, ವಿಧಾನಸಭಾಧ್ಯಕ್ಷ
ಭಾಗ್ಯವಿಧಾತ ಕೃತಿ ಲೋಕಾರ್ಪಣೆ
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಮೈಸೂರು ವಿವಿ ಹಿರಿಯ ವಿದ್ಯಾರ್ಥಿಗಳ ಒಕ್ಕೂಟ(ರಿ)ದ ವತಿಯಿಂದ ಸಂಘದ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಯುವ ಪತ್ರಕರ್ತ ಸಿಂಧುವಳ್ಳಿ ಸುಧೀರ ವಿರಚಿತ ಸಿದ್ದರಾಮಯ್ಯನವರ ರಾಜಕೀಯ ಜೀವಮಾನ ಸಾಧನೆ ಕುರಿತ ʼಭಾಗ್ಯವಿಧಾತʼ ಕೃತಿಯನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಲೋಕಾರ್ಪಣೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಡಾ.ಬಿ.ಜೆ.ವಿಜಯ್‌ಕುಮಾರ್, ಕೃತಿ ಕರ್ತೃ ಸಿಂಧುವಳ್ಳಿ ಸುಧೀರ, ಧರ್ಮಾಪುರ ನಾರಾಯಣ, ಇತರರು ಉಪಸ್ಥಿತರಿದ್ದರು.