ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಬಿಹಾರದ ಪರಿಸ್ಥಿತಿ ನೆನಪಾಗುತ್ತಿದೆ : ವಿಜಯೇಂದ್ರ
ಮೈಸೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಬಿಹಾರದ ಪರಿಸ್ಥಿತಿ ನೆನಪಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಈ ಸರಕಾರದ ಬಗ್ಗೆ ಜನ ಆಕ್ರೋಶಗೊಂಡಿದ್ದಾರೆ. ಲಾಲು ಪ್ರಸಾದ್ ಯಾದವ್ ಅವರ ಬಿಹಾರ ನೆನಪಾಗುತ್ತಿದೆ. ದಾವಣಗೆರೆಯ ಚನ್ನಗಿರಿಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದ್ದಾರೆ. ಇದೊಂದು ಅಸಮರ್ಥ ಸರಕಾರ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಕಳೆದ ಎರಡು ತಿಂಗಳುಗಳಿಂದ ಹತ್ಯೆ, ಲವ್ ಜಿಹಾದ್ ನೋಡುತ್ತಿದ್ದರೆ, ರಾಜ್ಯದಲ್ಲಿ ಸಿಎಂ, ಗೃಹ ಸಚಿವರು ಇದ್ದಾರೆಯೇ ಅನ್ನಿಸುತ್ತಿದೆ. ಬಿಹಾರದ ಪರಿಸ್ಥಿತಿ ಈಗ ರಾಜ್ಯದಲ್ಲಿ ಇದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು
ಪ್ರಜ್ವಲ್ ಪೆನ್ ಡ್ರೈವ್ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಬಿ.ವೈ.ವಿಜಯೇಂದ್ರ, "ಈ ಭಾಗದ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಲು ಸಭೆ ಕರೆದಿದ್ದೇನೆ. ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಸಭೆಯಲ್ಲಿ ಭಾಗಹಿಸುತ್ತಾರೆ. ನಾವು ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಎಲ್ಲಾ 6 ಕ್ಷೇತ್ರಗಳನ್ನು ಗೆಲ್ಲಲು ನಾವು ತಯಾರಿ ಮಾಡಿದ್ದೇವೆ" ಎಂದು ಹೇಳಿದರು.