ಸುಧಾಕರ್ಗೆ ಅನುಭವ ಹಾಗೂ ಮಾಹಿತಿಯ ಕೊರತೆ ಇದೆ : ವಿಜಯೇಂದ್ರ ತಿರುಗೇಟು
"ಪಕ್ಷಕ್ಕಾಗಿ ಎಲ್ಲಾ ಟೀಕೆಗಳನ್ನು ಸಹಿಸಿಕೊಳ್ಳುತ್ತೇನೆ"

ವಿಜಯೇಂದ್ರ
ಮೈಸೂರು : ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ನೇಮಕದಲ್ಲಿ ನನ್ನ ಯಾವ ಪಾತ್ರವೂ ಇಲ್ಲ. ಏಕಂದರೆ ಅದರ ಚುನಾವಣೆ ಉಸ್ತುವಾರಿ ಹೊತ್ತವರೇ ಬೇರೆ. ಉಸ್ತುವಾರಿಗಳು ಹೈಕಮಾಂಡ್ಗೆ ಹೆಸರು ಕಳುಹಿಸಿದ್ದಾರೆ. ಹೈಕಮಾಂಡ್ ತೀರ್ಮಾನ ಮಾಡಿದೆ. ಸುಧಾಕರ್ ಅವರಿಗೆ ಅನುಭವ ಹಾಗೂ ಮಾಹಿತಿ ಕೊರತೆ ಇದೆ ಎಂದು ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼನನಗೆ ಸುಧಾಕರ್ ಯಾವುದೇ ಫೋನ್ ಕರೆ ಮಾಡಿಲ್ಲ. ನಾಲ್ಕು ದಿನಗಳ ಹಿಂದೆ ಮಾತನಾಡಬೇಕೆಂದು ಮೇಸೆಜ್ ಮಾಡಿದ್ದರು. ದಿಲ್ಲಿಗೆ ಹೋಗಿದ್ದರಿಂದ ಭೇಟಿ ಸಾಧ್ಯವಾಗಿಲ್ಲ. ಅವರ ಕರೆ ಸ್ವೀಕರಿಸದಿರುವಷ್ಟು ದೊಡ್ಡವನು ನಾನಲ್ಲʼ ಎಂದರು.
ʼಯಾವ ಅರ್ಥದಲ್ಲಿ ಸುಧಾಕರ್ ಟೀಕೆ ಮಾಡಿದ್ದಾರೊ ಗೊತ್ತಿಲ್ಲ. ಪಕ್ಷಕ್ಕಾಗಿ ನಾನು ಎಲ್ಲಾ ಟೀಕೆಗಳನ್ನು ಸಹಿಸಿಕೊಳ್ಳುತ್ತೇನೆ. ಯಾರು ಏನೇ ಮಾತನಾಡಲಿ, ಎಲ್ಲವನ್ನೂ ಸೌಮ್ಯವಾಗಿ ಸ್ವೀಕರಿಸಿದ್ದೇನೆ. ಎಲ್ಲರಿಂದಲೂ ಅನುಭವಗಳನ್ನು ಕಲಿಯುತ್ತಿದ್ದೇನೆ. ನನಗೆ ಪಕ್ಷ ಮಾತ್ರ ಮುಖ್ಯʼ ಎಂದರು.
ಕುಂಭಮೇಳ ಟೀಕಿಸುವ ಕಾಂಗ್ರೆಸ್ನವರು ಅಯೋಗ್ಯರು :
ಕುಂಭಮೇಳವನ್ನು ಟೀಕೆ ಮಾಡುತ್ತಿರುವ ಕಾಂಗ್ರೆಸ್ ನವರೆಲ್ಲಾ ಅಯೋಗ್ಯರು. 144 ವರ್ಷದ ನಂತರ ನಡೆಯುತ್ತಿರುವ ಕುಂಭಮೇಳವನ್ನು ಬಾಯಿಗೆ ಬಂದಂತೆ ಇವರು ಟೀಕೆ ಮಾಡುತ್ತಿದ್ದಾರೆ. ಹಿಂದೂಗಳ ಭಾವನೆಗೆ ಧಕ್ಕೆ ತರುವುದೇ ಕಾಂಗ್ರೆಸ್ ನವರ ಉದ್ದೇಶ ಎಂದು ಆಕ್ರೋಶ ಹೊರಹಾಕಿದರು.