ಬಡವರ ಪರ ಕೆಲಸ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ : ಯತೀಂದ್ರ ಸಿದ್ದರಾಮಯ್ಯ
ಮೈಸೂರು: ಬಡವರು ಹಾಗೂ ಜನಸಾಮಾನ್ಯರ ಪರ ಕೆಲಸ ಮಾಡಿ ಅವರ ಕುಂದು ಕೊರತೆಗಳಿಗೆ ಸ್ಪಂದಿಸುವಂತಹ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರನ್ನು ಗೆಲ್ಲಿಸಿ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ ಮನವಿ ಮಾಡಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬಸವನಪುರ ಗ್ರಾಮದಲ್ಲಿ ಶುಕ್ರವಾರ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಇದೇ ತಿಂಗಳ ಎಪ್ರಿಲ್ 26 ರಂದು ಮೈಸೂರು ಮತ್ತು ಕೊಡಗು ಕ್ಷೇತ್ರದ ಚುನಾವಣೆ ನಡೆಯುತ್ತಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಎಂ.ಲಕ್ಷ್ಮಣ್ ಅವರಿಗೆ, ಹಸ್ತದ ಗುರುತಿಗೆ ಮತ ನೀಡಿ ಅವರನ್ನು ಜಯಶೀಲರನ್ನಾಗಿ ಮಾಡಿ ಎಂದು ಹೇಳಿದರು.
ಯಾವ ಪಕ್ಷಕ್ಕೆ ಮತದಾನ ಮಾಡಬೇಕು ಎಂಬುದನ್ನು ಜನರು ನಿರ್ಧರಿಸಬೇಕು. ಯಾವ ಪಕ್ಷ ಹೆಚ್ಚು ಬಡವರ ಪರವಾಗಿ ಕೆಲಸ ಮಾಡಿದೆ ಅವರಿಗೆ ಮತದಾನ ಮಾಡಿ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ 10 ವರ್ಷದಿಂದ ಏನು ಕೆಲಸ ಮಾಡಿದ್ದಾರೆ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಮತ ನೀಡಿ ಎಂದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ರೈತರಿಗೆ ಭರವಸೆಯನ್ನು ನೀಡಿದ್ದರು. ರೈತರ ಆದಾಯ ಹೆಚ್ಚು ಆಗಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಬಿಜೆಪಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ ಎಂದರು.
ಕಾಂಗ್ರೆಸ್ ಪಕ್ಷ 2013ರಲ್ಲಿ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ನೀಡಿತು 158 ಭರವಸೆಗಳನ್ನು ಈಡೇರಿಸಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಶೂ ಭಾಗ್ಯ, ರೈತರ ಸಾಲ ಮನ್ನಾ, ಇಂದಿರಾ ಕ್ಯಾಂಟೀನ್ ಹಾಗೂ ವಿದ್ಯಾಸಿರಿ ಯೋಜನೆಗಳನ್ನು ಈಡೇರಿಸಿದೆ ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಒಂಬತ್ತು ತಿಂಗಳ ಒಳಗೆ ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದೆ. ಪ್ರತಿಯೊಂದು ಕುಟುಂಬಗಳಿಗೆ ನಾಲ್ಕರಿಂದ ಐದು ಸಾವಿರ ಹಣ ಉಳಿತಾಯವಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿಯೊಂದು ಮನೆಯ ಗೃಹಿಣಿಯರು 2000 ಪಡೆದುಕೊಳ್ಳುತ್ತಿದ್ದಾರೆ. ವಿಧ್ಯುತ್ ಅನ್ನು ಉಚಿತವಾಗಿ ಪಡೆದುಕೊಳ್ಳುತ್ತಿದ್ದಾರೆ. ಶಕ್ತಿ ಯೋಜನೆಯಡಿ ಉಚಿತವಾಗಿ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಅನ್ನಭಾಗ್ಯದಲ್ಲಿ 5 ಕೆಜಿ ಅಕ್ಕಿ 5 ಕೆ.ಜಿ ಗೆ ಹಣವನ್ನು ಪಡೆಯುತ್ತಿದ್ದಾರೆ ಎಂದರು.