ಉಪ ಚುನಾವಣೆಯಲ್ಲಿ ಲಾಭ ಪಡೆಯುವುದಕ್ಕಾಗಿ ʼವಕ್ಫ್ ಆಸ್ತಿʼ ವಿವಾದ : ಎಂ.ಲಕ್ಷ್ಮಣ್
ಎಂ.ಲಕ್ಷ್ಮಣ್
ಮೈಸೂರು: ʼರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಲಾಭ ಪಡೆಯುವುದಕ್ಕಾಗಿಯೇ ವಕ್ಫ್ ಆಸ್ತಿ ವಿವಾದ ಮಾಡಲಾಗಿದೆʼ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಸುಮಾರು 33 ಎಕರೆ ಭೂಮಿಯನ್ನು ವಕ್ತ್ ಆಸ್ತಿ ಎಂದು ಬರೆದುಕೊಟ್ಟಿದ್ದರುʼ ಎಂದು ಹೇಳಿದರು.
ʼವಕ್ಫ್ ಆಸ್ತಿ ವಿಚಾರದಲ್ಲಿ ಕಲಬುರಗಿ, ವಿಜಯಪುರದಲ್ಲಿ ರೈತರಿಗೆ ನೋಟಿಸ್ ಕೊಡಲಾಗಿದೆ. ಅದನ್ನು ಬಿಜೆಪಿಯವರು ಹಿಂದೂ – ಮುಸ್ಲಿಂ ಎಂದು ವಿಭಾಗಿಸಿ ಸೌಹಾರ್ದ ಕದಡುತ್ತಿದ್ದಾರೆ. ಈ ಕುರಿತು ಈಗಾಗಲೇ ಸಚಿವ ಎಂ.ಬಿ.ಪಾಟೀಲ್ ದಾಖಲೆ ಬಿಡುಗಡೆ ಮಾಡಿದ್ದಾರೆʼ ಎಂದರು.
ʼ1947ರಿಂದಲೂ ರೈತರಿಗೆ ನೋಟಿಸ್ ಕೊಡುವ ವ್ಯವಸ್ಥೆ ಇದ್ದು, ಇದೇನು ಹೊಸತಲ್ಲ. ವಿಜಯಪುರದಲ್ಲಿ 3 ಪ್ರಕರಣದಲ್ಲಿ ಸುಮಾರು 11 ಎಕರೆ ಪ್ರದೇಶದ ರೈತರಿಗೆ ನೋಟಿಸ್ ಕೊಡಲಾಗಿದೆ. ಆದರೆ, ಬಿಜೆಪಿಯು 1,400 ಎಕರೆ ಎಂದು ಸುಳ್ಳು ಹೇಳುತ್ತಿದೆʼ ಎಂದು ದೂರಿದರು.
ʼನೀಡಲಾದ 25 ನೋಟಿಸ್ ಅನ್ನು ವಾಪಸ್ ಪಡೆಯಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಜನರು ಬಿಜೆಪಿಯ ಕುತಂತ್ರ ರಾಜಕಾರಣಕ್ಕೆ ಬಲಿಯಾಗಬಾರದು. ಒಡೆದು ಆಳುವ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ. ಮುಸ್ಲಿಮರೂ ಭಾರತ ಮಾತೆಯ ಮಕ್ಕಳೇ, ಅವರಿಗೂ ದೇಶದ ಸಂಪತ್ತಿನಲ್ಲಿ ಪಾಲಿದೆ’ ಎಂದರು.
ಲೋಕಾಯುಕ್ತಕ್ಕೆ ದೂರು ಕೊಡಲಿ:
ಮುಡಾದಲ್ಲಿ 5 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಕೆ.ಆರ್.ಕ್ಷೇತ್ರದ ಶಾಸಕರು ಹೇಳುತ್ತಿದ್ದು, ದಾಖಲೆಯಿದ್ದರೆ ಅವರು ಲೋಕಾಯುಕ್ತಕ್ಕೆ ದೂರು ನೀಡಲಿ. 50:50 ಅನುಪಾತದಡಿ ಬದಲಿ ನಿವೇಶನ ನಿಯಮಾವಳಿ ಜಾರಿಗೊಳಿಸಿದ್ದು ಬಿಜೆಪಿಯವರೇ. ನಿವೇಶನ ವಾಪಸ್ ಮಾಡಿ ಎಂದರೆ ಅವರು ಕೊಡುವರೇ’ ಎಂದು ಎಂ.ಲಕ್ಷ್ಮಣ್ ಪ್ರಶ್ನಿಸಿದರು.