ಯತ್ನಾಳ್ ಕಾಂಗ್ರೆಸ್ ನಿಂದ ಸುಪಾರಿ ಪಡೆದು ಬಿಜೆಪಿ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ: ರೇಣುಕಾಚಾರ್ಯ ಆರೋಪ
ಮೈಸೂರು: ಕಾಂಗ್ರೆಸ್ ನಿಂದ ಸುಪಾರಿ ಪಡೆದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೋರಾಟಕ್ಕೆ ಇಳಿದಿದ್ದಾರೆ ಎಂದು ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಬಲಿಸಿ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಿರುವ ಬಿಜೆಪಿ ಬಣದ ಕೆಲವರು ಶನಿವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಶ್ರೀಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ನಂತರ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದರು.
ಯತ್ನಾಳ್ ಪಕ್ಷಾತೀತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಬೆಂಬಲಿಸುತ್ತೇನೆ ಎನ್ನುತ್ತಿದ್ದು, ಇದರ ಅರ್ಥ ಏನು? ತನ್ನ ಹರಕು ಬಾಯಿಯಿಂದ ಕಳೆದ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲೂ ಬಿಜೆಪಿ ಶಾಸಕರು ಸೋಲಲು ಯತ್ನಾಳ್ ಕಾರಣ. ಈಗ ನಡೆದ ಮೂರು ಉಪ ಚುನಾವಣೆಯಲ್ಲೂ ಬಿಜೆಪಿ ಸೋಲಿಗೆ ಯತ್ನಾಳ್ ಕಾರಣ. ವಿಜಯಪುರದ ಪ್ರಭಾವಿ ಸಚಿವ ಎಂ.ಬಿ.ಪಾಟೀಲ್ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಯಡಿಯೂರಪ್ಪರಿಗೆ ಹಿಂದಿನಿಂದಲೂ ಇಂತಹ ಶಕುನಿಗಳು, ಮೀರ್ ಸಾಧಕರುಗಳು ತೊಂದರೆ ಕೊಡುತ್ತಲೇ ಇದ್ದಾರೆ. ವಿಜಯೇಂದ್ರರನ್ನು ಬಿ.ಎಸ್.ಯಡಿಯೂರಪ್ಪ ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ. ಬಿಜೆಪಿ ಹೈಕಮಾಂಡ್ ಮಾಡಿರುವುದು. ವಿಜಯೇಂದ್ರರಿಗೆ ಬೈದರೆ ಹೈಕಮಾಂಡ್ ಗೆ ಬೈದಂತೆ ಎಂದು ಹೇಳಿದರು.
ನಿಮ್ಮನ್ನು ಬೆಂಬಲಿಸುವ ರಾಷ್ಟ್ರ ನಾಯಕರ ಹೆಸರು ಬಹಿರಂಗಪಡಿಸಿ
'ನಮ್ಮ ಹೋರಾಟಕ್ಕೆ ರಾಷ್ಟ್ರ ನಾಯಕರ ಬೆಂಬಲ ಇದೆ' ಎಂದು ಶಾಸಕ ಯತ್ನಾಳ್ ಹೇಳುತ್ತಿದ್ದಾರೆ. ತಾಕತ್ತಿದ್ದರೆ ಆ ರಾಷ್ಟ್ರ ನಾಯಕ ಯಾರೆಂದು ಬಹಿರಂಗಪಡಿಸಲಿ ಎಂದು ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.
ವಕ್ಫ್ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದ ವೇಳೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಹೋದಾಕ್ಷಣ ಅವರು ಯತ್ನಾಳ್ ಹೋರಾಟಕ್ಕೆ ಬೆಂಬಲ ಕೊಡುತ್ತಿದ್ದಾರೆ ಎಂದರ್ಥವಲ್ಲ ಎಂದರು.
ಮಠಾಧೀಶರು ಛೀಮಾರಿ ಹಾಕಬೇಕು
ಬಸವಣ್ಣ ವಿಶ್ವಗುರು ಅಂತಹ ನಾಯಕರಿಗೆ ಅಪಮಾನ ಮಾಡಿರುವ ಯತ್ನಾಳ್ ರಿಗೆ ಮಠಾಧೀಶರು ಛೀಮಾರಿ ಹಾಕಿ ಬಿಜೆಪಿಯಿಂದ ಉಚ್ಚಾಟಿಸುವಂತೆ ಒತ್ತಾಯಿಸಬೇಕು ಎಂದು ರೇಣುಕಾಚಾರ್ಯ ಒತ್ತಾಯಿಸಿದರು.
ಬೆದರಿಕೆ ಕರೆಗಳು ಬರುತ್ತಿವೆ
ಯತ್ನಾಳ್ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ನನಗೆ ನಿನ್ನೆ ರಾತ್ರಿಯಿಂದ ಬೆದರಿಕೆ ಕರೆಗಳು ಬರುತ್ತಿವೆ. ಆದರೆ ಅಂತಹ ಬೆದರಿಕೆಗಳಿಗೆಲ್ಲ ಹೆದರುವುದಿಲ್ಲ ಎಂದ ಯತ್ನಾಳ್, ಮುರುಡೇಶ್ವರದಲ್ಲಿ ಸದ್ಯದಲ್ಲೇ ಸಭೆ ನಡೆಸಲಾಗುವುದು. ನಂತರ ದಾವಣಗೆರೆಯಲ್ಲಿ 3-4 ಲಕ್ಷ ಜನರನ್ನು ಸೇರಿಸಿ ಬೃಹತ್ ಸಭೆ ನಡೆಸಲಾಗುವುದು. ಯತ್ನಾಳ್ ಉಚ್ಚಾಟನೆಗೆ ಆಗ್ರಹಿಸಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ಬಿ.ಸಿ.ಪಾಟೀಲ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಹರತಾಳು ಹಾಲಪ್ಪ, ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಯತ್ನಾಳ್ ಉಚ್ಚಾಟನೆಗೆ ಆಗ್ರಹಿಸಿ ಘೋಷಣೆ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಮೊದಲು ಉಚ್ಚಾಟನೆ ಮಾಡಿ, ನಂತರ ಸಭೆ ಮಾಡಿ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಶನಿವಾರ ಮಾಜಿ ಶಾಸಕ ರೇಣುಕಾಚಾರ್ಯ ಬಣದ ಬಿಜೆಪಿ ಗುಂಪು ಸುದ್ದಿಗೋಷ್ಠಿ ನಡೆಸುವ ವೇಳೆ ಬಿಜೆಪಿ ಕಾರ್ಯಕರ್ತರ ಗುಂಪು ಗದ್ದಲ ಉಂಟು ಮಾಡಿತು.
ಮಾಜಿ ಶಾಸಕ ರೇಣುಕಾಚಾರ್ಯ ಮಾತನಾಡುವ ವೇಳೆ ಎದ್ದು ನಿಂತ ಗುಂಪು, 'ನೀವು ಈ ರೀತಿ ಎಲ್ಲಾ ಕಡೆ ತಿರುಗುವುದು ಬೇಡ, ಯತ್ನಾಳ್ ಒಬ್ಬನೇ ಹಿಂದೂ ಅಲ್ಲ, ನಾವು ಹಿಂದೂಗಳು ಮೊದಲು ಆತನನನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ನಿರ್ಣಯ ಕೈಗೊಳ್ಳಿ' ಎಂದು ಕೂಗಾಡಿದರು.
ಈ ವೇಳೆ ಬಿಜೆಪಿ ನಾಯಕರು ಎಷ್ಟೇ ಸಮಾಧಾನಪಡಿಸಿದರೂ ಕಾರ್ಯಕರ್ತರು ಮಾತ್ರ ಸುಮ್ಮನಾಗಲಿಲ್ಲ. ರೇಣುಕಾಚಾರ್ಯ 'ಭಾರತ್ ಮಾತಾ ಕೀ ಜೈ' ಎಂದು ಘೋಷಣೆ ಕೂಗಿ ಒಮ್ಮೆ ಸುಮ್ಮನಾಗಿಸಿದರು. ಆದರೂ ಆ ಗುಂಪು ಪದೇ ಪದೇ ಯತ್ನಾಳ್ ಉಚ್ಛಾಟಿಸುವಂತೆ ಏರು ಧ್ವನಿಯಲ್ಲಿ ಘೋಷಣೆ ಕೂಗುತ್ತಿದ್ದರು. ಬಳಿಕ ಹೇಗೋ ಮಾಡಿ ಅವರನ್ನು ಸುಮ್ಮನಾಗಿಸಿದರು.