ಕುಮಾರಸ್ವಾಮಿ ವಿರುದ್ಧ ʼಕರಿಯʼ ಪದ ಬಳಕೆ | ಕ್ಷಮೆಯಾಚಿಸಿದ ಸಚಿವ ಝಮೀರ್ ಅಹ್ಮದ್
ಎಚ್.ಡಿ.ಕುಮಾರಸ್ವಾಮಿ/ಝಮೀರ್ ಅಹ್ಮದ್
ಮೈಸೂರು : ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ʼಕರಿಯʼ ಎಂದು ಸಂಬೋಧಿಸಿದ್ದಕ್ಕೆ ಸಚಿವ ಝಮೀರ್ ಅಹ್ಮದ್ ಖಾನ್ ಕ್ಷಮೆಯಾಚಿಸಿದ್ದಾರೆ.
ಮಂಗಳವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಕುಮಾರಸ್ವಾಮಿಯನ್ನು ʼಕರಿಯಣ್ಣʼ ಎಂದು ಕರೆದಿದ್ದು ಇದೇ ಮೊದಲಲ್ಲ. ನಾನು ಹೇಳಿರುವ ಉದ್ದೇಶವೇ ಬೇರೆ. ಪ್ರೀತಿಯಿಂದ ಕುಮಾರಸ್ವಾಮಿ ಅವರನ್ನು ಹಾಗೇ ಹಲವು ಸಲ ಕರೆದಿದ್ದೇನೆ. ಅವರೂ ನನ್ನನ್ನು ʼಕುಳ್ಳʼ ಎಂದು ಕರೆದಿದ್ದಾರೆ. ನನ್ನ ಮಾತಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಆದರೆ ಚುನಾವಣೆ ಕಾರಣಕ್ಕೆ ಇದನ್ನು ವಿವಾದ ಮಾಡಲಾಗುತ್ತಿದೆ" ಎಂದರು.
'ದೇವೇಗೌಡರನ್ನು ಕೊಂಡುಕೊಳ್ಳುತ್ತೇನೆ' ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ʼನನಗೆ ದೇವೇಗೌಡರ ಮೇಲೆ ಬಹಳ ಗೌರವವಿದೆ. ಈ ಹಿಂದೆ ಚುನಾವಣೆಯಲ್ಲಿ ಎಚ್.ಡಿ ಕುಮಾರಸ್ವಾಮಿ ಮುಸ್ಲಿಮರ ಮತಗಳು ಬೇಡ ಎಂದಿದ್ದರು. ಈಗ ದುಡ್ಡು ಕೊಟ್ಟು ಖರೀದಿಸಲು ಮುಂದಾಗಿದ್ದಾರೆ. ಅದನ್ನು ಉಲ್ಲೇಖಸಿ ನಾನು ಹೇಳಿದ್ದೇನೆ ಅಷ್ಟೇʼ ಸಮಜಾಯಿಷಿ ನೀಡಿದರು.