ಬಿಹಾರದಲ್ಲಿ ಕುಸಿದ ಇನ್ನೊಂದು ಸೇತುವೆ; ಕಳೆದ 10 ದಿನಗಳಲ್ಲಿ ಇದು ಆರನೇ ಘಟನೆ
PC : NDTV
ಪಾಟ್ನಾ: ಬಿಹಾರದಲ್ಲಿ ಸೇತುವೆಗಳ ಕುಸಿತ ಸರಣಿ ಮುಂದುವರಿದಿದ್ದು ಇಂದು ಮತ್ತೊಂದು ಸೇತುವೆ ಕುಸಿದಿದೆ. ಕಳೆದ ಹತ್ತು ದಿನಗಳಲ್ಲಿ ರಾಜ್ಯದಲ್ಲಿ ಕುಸಿದ ಆರನೇ ಸೇತುವೆ ಇದಾಗಿದೆ.
ರಾಜ್ಯದ ಠಾಕುರ್ಗಂಜ್ ಬ್ಲಾಖ್ನಲ್ಲಿರುವ ಬಂದ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ ಇಂದು ನೀರಿನೊಳಗೆ ಒಂದು ಅಡಿ ಆಳಕ್ಕೆ ಕುಸಿದಿದೆ. ಭಾರೀ ಮಳೆಯಿಂದಾಗಿ ಈ ದುರ್ಘಟನೆ ಸಂಭವಿಸಿದ್ದು ಸೇತುವೆಯ ಮೇಲ್ಮೈಯಲ್ಲಿ ಬಿರುಕುಗಳೂ ಸೃಷ್ಟಿಯಾಗಿದ್ದು ಸೇತುವೆ ಬಳಸಲು ಅಸಾಧ್ಯವಾಗಿದೆ.
ಪಠಾರಿಯಾ ಪಂಚಾಯತ್ ವ್ಯಾಪ್ತಿಯ ಖೋಷಿ ದಂಗಿ ಗ್ರಾಮದಲ್ಲಿನ ಈ ಸೇತುವೆಯನ್ನು ಸಂಸದರ ನಿಧಿ ಬಳಸಿ 2007-2008ರಲ್ಲಿ ಆಗಿನ ಸಂಸದ ಮೊಹಮ್ಮದ್ ತಸ್ಲೀಮುದ್ದೀನ್ ಅವರ ಮುತುವರ್ಜಿಯಿಂದ ನಿರ್ಮಿಸಲಾಗಿತ್ತು. ಆದರೆ ಇಂದು ನೀರಿನ ರಭಸ ತಾಳಲಾರದೆ ಸೇತುವೆ ಕುಸಿದಿದೆ.
ಈ ಸೇತುವೆ ಮೂರರಿಂದ ನಾಲ್ಕು ಪಂಚಾಯತ್ಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು ಈಗ ಸ್ಥಳೀಯ ಸುಮಾರು 60,000 ನಿವಾಸಿಗಳು ಸಂಪರ್ಕ ವ್ಯವಸ್ಥೆಯ ಕೊರತೆಯನ್ನೆದುರಿಸುತ್ತಿದ್ದಾರೆ.
ರವಿವಾರವಷ್ಟೇ ಮಧುಬನಿ ಪ್ರಾಂತ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದಿತ್ತು. ಬಿಹಾರ ಸರ್ಕಾರದ ಗ್ರಾಮೀಣ ಕಾಮಗಾರಿಗಳ ಇಲಾಖೆ ರೂ 3 ಕೋಟಿ ವೆಚ್ಚದಲ್ಲಿ ಈ ಸೇತುವೆಯನ್ನು 2021ರಲ್ಲಿ ನಿರ್ಮಿಸಿತ್ತು.
ಕಳೆದ ಗುರುವಾರ ಕಿಶನ್ಗಂಜ್ ಜಿಲ್ಲೆಯಲ್ಲಿ ಸೇತುವೆಯೊಂದು ಕುಸಿದಿದ್ದರೆ, ಅದಕ್ಕೂ ಮುಂಚೆ ಜೂನ್ 23ರಂದು ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಜೂನ್ 22ರಂದು ಸಿವನ್ ಎಂಬಲ್ಲಿ ಗಂದಕ್ ಕಾಲುವೆಗೆ ಅಡ್ಡಲಾಗಿದ್ದ ಸೇತುವೆ ಕುಸಿದಿದ್ದರೆ, ಜೂನ್ 19ರಂದು ಅರಾರಿಯಾ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಒಂದು ಭಾಗ ಕುಸಿದಿತ್ತು.
ಈ ಸರಣಿ ಸೇತುವೆ ಕುಸಿತಗಳು ಹಲವು ಸಂಶಯಗಳಿಗೂ ಕಾರಣವಾಗಿದೆ. ಲೋಕಸಭಾ ಚುನಾವಣೆಯ ನಂತರವಷ್ಟೇ ಸೇತುವೆಗಳು ಏಕೆ ಕುಸಿಯುತ್ತಿವೆ ಎಂದು ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಪ್ರಶ್ನಿಸಿದ್ದರಲ್ಲದೆ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಸಂಚೇನಾದರೂ ಇದೆಯೇ ಎಂದು ಸಂಶಯ ವ್ಯಕ್ತಪಡಿಸಿದ್ದರು.