ಬಿಜೆಪಿಯಿಂದ ದ್ವೇಷದ ರಾಜಕಾರಣ: ಮಹುವಾ ಉಚ್ಚಾಟನೆಗೆ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ
ಮಹುವಾಗೆ ಪಕ್ಷದ ಪೂರ್ಣ ಬೆಂಬಲವಿದೆ ಎಂದ ಪಶ್ಚಿಮ ಬಂಗಾಳ ಸಿಎಂ
ಮಮತಾ ಬ್ಯಾನರ್ಜಿ (PTI)
ಕುರ್ಸಿಯಾಂಗ್: ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ತಮ್ಮ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸಂಸತ್ತಿನಿಂದ ಉಚ್ಚಾಟಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ ಹಾಗೂ ಆ ಪಕ್ಷ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
“ಬಿಜೆಪಿಯ ಧೋರಣೆ ನೋಡಿ ಬೇಸರವಾಯಿತು. ಅವರು ಹೇಗೆ ಕಾರ್ಯಾಚರಿಸುತ್ತಿದ್ದಾರೆ ಗೊತ್ತಿಲ್ಲ, ಇಂದು 495 ಪುಟಗಳ ವರದಿ ಸಲ್ಲಿಸಲಾಯಿತು ಮತ್ತು ಕೂಡಲೇ ಆದನ್ನು ಅಂಗೀಕರಿಸಲಾಯಿತು, ಸಂಸದರಿಗೆ ಮಾತನಾಡಲು ಕೆಲವು ನಿಮಿಷಗಳನ್ನಷ್ಟೇ ನೀಡಿದರು. ಬಹುಮತವಿದೆಯೆಂದು ವರದಿ ಓದಲು ಕೂಡ ಸಮಯ ನೀಡದೆ ಅಂಗೀಕರಿಸಿದ್ದಾರೆ,” ಎಂದು ಹೇಳಿದ ಮಮತಾ ಬ್ಯಾನರ್ಜಿ, ತಮ್ಮ ಪಕ್ಷ ಈ ಪ್ರಕರಣದಲ್ಲಿ ಮಹುವಾ ಅವರ ಬೆಂಬಲಕ್ಕೆ ನಿಂತಿರುವುದಾಗಿ ತಿಳಿಸಿದರು.
“ಮಹುವಾ ವಿಚಾರದಲ್ಲಿ ವಿಪಕ್ಷಗಳ ಒಗ್ಗಟ್ಟು ಹಾಗೂ ಇಂಡಿಯಾ ಮೈತ್ರಿಕೂಟ ಸದನದಿಂದ ಹೊರನಡೆದಿರುವುದು ಖುಷಿ ತಂದಿದೆ. ಪಕ್ಷ ಮಹುವಾ ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಆಕೆ ಮಹಿಳೆ ಮತ್ತು ಯುವ ಸಂಸದೆ, ಇಂದು ಬಿಜೆಪಿ ಪ್ರಜಾಪ್ರಭುತ್ವ ಮತ್ತು ಪ್ರಜಾಪ್ರಭುತ್ವದ ಹಕ್ಕುಗಳಿಗೆ ದ್ರೋಹವೆಸಗಿದೆ. ಮಹುವಾಗೆ ತಮ್ಮ ನಿಲುವು ಸ್ಪಷ್ಟ ಪಡಿಸಲು ನಿರಾಕರಿಸಲಾಗಿದೆ. ಇದು ಸಂವಿಧಾನಿಕ ಹಕ್ಕುಗಳ ಉಲ್ಲಂಘನೆ,” ಎಂದು ಮಮತಾ ಹೇಳಿದರು.