18ನೇ ಲೋಕಸಭೆಯಲ್ಲಿ ಗಮನ ಸೆಳೆದ ಹತ್ತು ಪ್ರಮುಖ ದಲಿತ ಸಂಸದರು
18ನೇ ಲೋಕಸಭೆಗೆ ಬಂದಿರುವ ದಲಿತ ಸಂಸದರ ಪೈಕಿ ಬೇರೆ ಬೇರೆ ಕಾರಣಗಳಿಗಾಗಿ ಗಮನ ಸೆಳೆದಿರುವ, ಚರ್ಚೆಯಾಗಿರುವ ಹತ್ತು ಸಂಸದರ ಪರಿಚಯ ಇಲ್ಲಿದೆ.
ಈ ಪೈಕಿ ಇದೇ ಮೊದಲ ಬಾರಿ ಆಯ್ಕೆಯಾದವರೂ ಇದ್ದಾರೆ, ಹಲವು ಬಾರಿ ಲೋಕಸಭಾ ಸದಸ್ಯರಾದವರೂ ಇದ್ದಾರೆ. ಯುವ ನಾಯಕ, ನಾಯಕಿಯರೂ ಇದ್ದಾರೆ, ಹಿರಿಯರೂ ಅನುಭವಿಗಳೂ ಇದ್ದಾರೆ.
ಈ ಸಂಸದರಿಂದ ಮುಂದಿನ ದಿನಗಳಲ್ಲಿ ಸಂಸತ್ತಿನ ಒಳಗೆ ಹಾಗು ಹೊರಗೆ ಭಾರೀ ನಿರೀಕ್ಷೆಯಿದೆ.
► ಚಂದ್ರಶೇಖರ್ ಆಝಾದ್
PC : PTI
ಆಕರ್ಷಕ ಮೀಸೆ ಮತ್ತು ನೀಲಿ ಸೂಟ್, ನೀಲಿ ಶಾಲಿನಿಂದ ಇಡೀ ಸದನದ ಗಮನ ಸೆಳೆದ ಚಂದ್ರಶೇಖರ್ ಆಝಾದ್ ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಚಂದ್ರಶೇಖರ್, 2024ರಲ್ಲಿ ಮೊದಲನೇ ಬಾರಿಗೆ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ದಲಿತ ನಾಯಕರಲ್ಲೊಬ್ಬರು.
ಉತ್ತರ ಪ್ರದೇಶದ ರಾಜಧಾನಿ ಲಕ್ನೌನಿಂದ 693 ಕಿಲೋ ಮೀಟರ್ ದೂರದಲ್ಲಿರುವಂತಹ ಜಿಲ್ಲೆ ಸಹರಾನ್ ಪುರ್ . ಈ ಜಿಲ್ಲೆಯ ಚುಟ್ಮಲ್ಪುರ್ ಎಂಬ ಪ್ರದೇಶದಲ್ಲಿ ಆಂಗ್ಲೋ ಹಿಂದುಸ್ತಾನ್ ಕಾಲೇಜು ಇದೆ.
ಒಂದು ದಿನ ದಲಿತ ಯುವಕನೊಬ್ಬ ಈ ಕಾಲೇಜಿಗೆ ಬೇಗ ತಲುಪುತ್ತಾನೆ ಮತ್ತು ಅರ್ಧಗಂಟೆ ನಂತರ ನೋಡಿದಾಗ ಈ ಹುಡುಗನ ಮೈಯಿಡೀ ರಕ್ತ. ಹುಡುಗ ಬೆಂಚು ಕ್ಲೀನ್ ಮಾಡಿಲ್ಲ ಎಂಬ ಕಾರಣಕ್ಕೆ ಮೇಲ್ಜಾತಿಯ ಹುಡುಗರು ಆತನನ್ನು ಹಿಡಿದು ಥಳಿಸಿದ್ದರು. ಈ ದೌರ್ಜನ್ಯ ಅಲ್ಲಿಗೆ ನಿಲ್ಲಲಿಲ್ಲ. ಏಳು ದಿನಗಳ ನಂತರ ಅದೇ ಮೇಲ್ಜಾತಿ ಹುಡುಗರು ಆ ದಲಿತ ಹುಡುಗನನ್ನು ಮತ್ತೆ ಥಳಿಸಿದ್ದರು. ಅಷ್ಟಕ್ಕೂ ಆತ ಮಾಡಿದ್ದ ತಪ್ಪು, ಮೇಲ್ಜಾತಿ ಹುಡುಗರಿಗಿಂತ ಹೆಚ್ಚು ಅಂಕ ಗಳಿಸಿದ್ದು!
ದಲಿತ ಹುಡುಗ ಮನೆಯಲ್ಲಿ ಈ ಬಗ್ಗೆ ಹೇಳಿದಾಗ ಮನೆಯವರು ಧೈರ್ಯ ತೋರಿಸಿ ಓರ್ವ ವಕೀಲರನ್ನು ಸಂಪರ್ಕಿಸುತ್ತಾರೆ. ಆ ವಕೀಲರೇ ಚಂದ್ರಶೇಖರ್.
ನೇರ ಹೋರಾಟ ಮಾಡಿದರೆ ಸಮಸ್ಯೆಗೆ ಪರಿಹಾರ ಸಿಗಲಿಕ್ಕಿಲ್ಲ ಎಂದು ಅರ್ಥ ಮಾಡಿಕೊಂಡ ವಕೀಲ ಚಂದ್ರಶೇಖರ್ ಭೀಮ್ ಆರ್ಮಿ ಹೆಸರಿನ ಸಂಘಟನೆ ಸ್ಥಾಪಿಸುತ್ತಾರೆ. ಈ ಸಂಘಟನೆಯ ಮೂಲಕ ದಲಿತರ ಹಕ್ಕುಗಳಿಗಾಗಿ ಹೋರಾಟ ಪ್ರಾರಂಭಿಸುತ್ತಾರೆ. ಚಂದ್ರಶೇಖರ್ ಬಳಿ ಬಂದಿದ್ದ ದಲಿತ ಹುಡುಗನ ಸಮಸ್ಯೆಗೂ ಪರಿಹಾರ ಸಿಗುತ್ತದೆ. ಅಷ್ಟೇ ಅಲ್ಲ ಈ ಹೋರಾಟದಿಂದ ಒಬ್ಬ ಹೊಸ ದಲಿತ ನಾಯಕನೂ ಹುಟ್ಟಿ ಬರುತ್ತಾನೆ. ಸಾಮಾನ್ಯ ವಕೀಲ, ಜನನಾಯಕನಾದದ್ದು ಚಂದ್ರಶೇಖರ್ ಜೀವನದಲ್ಲಿನ ಮಹತ್ವದ ಯಾನ.
ಕ್ರಮೇಣ ಚಂದ್ರಶೇಖರ್ ದಲಿತ ಹೋರಾಟಗಾರನಾಗಿ ಹೆಸರು ಮಾಡುತ್ತಾರೆ. ಲಕ್ಷಗಟ್ಟಲೆ ಜನರ ಬೆಂಬಲ ಗಳಿಸುತ್ತಾರೆ. 2020ರಲ್ಲಿ ಆಜಾದ್ ಸಮಾಜ್ ಪಾರ್ಟಿ ಎಂಬ ರಾಜಕೀಯ ಪಕ್ಷ ಕಟ್ಟುತ್ತಾರೆ. 2022ರಲ್ಲಿ ಉತ್ತರಪ್ರದೇಶ ವಿಧಾನಸಭೆಯ ಚುನಾವಣೆಗೆ ಸ್ಪರ್ಧಿಸುವ ತೀರ್ಮಾನ ಮಾಡುತ್ತಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಸ್ಪರ್ಧಿಸುತ್ತಾರೆ. ಆದರೆ ಚುನಾವಣೆಯಲ್ಲಿ ಸೋಲನುಭವಿಸುತ್ತಾರೆ.
ಇನ್ನಾದರೂ ಚಂದ್ರಶೇಖರ್ ಸುಮ್ಮನೆ ಕೂರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆದದ್ದೇ ಬೇರೆ. 2024ರ ಲೋಕಸಭಾ ಚುನಾವಣೆಯಲ್ಲಿ ನಗಿನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ಅಂತರದಿಂದ ಚಂದ್ರಶೇಖರ್ ಜಯ ಗಳಿಸಿದರು. ಮೊನ್ನೆ ಜೂನ್ 25ರಂದು ಲೋಕಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಮಾಣವಚನದ ಸಂದರ್ಭ ಮುಂದಿನ ಐದು ವರ್ಷ ಸಂಸತ್ತಿನಲ್ಲಿ ತನ್ನ ಕಾರ್ಯವೈಖರಿ ಹೇಗಿರಲಿದೆ ಎಂಬುದರ ಝಲಕನ್ನು ಚಂದ್ರಶೇಖರ್ ಆಝಾದ್ ತೋರಿಸಿಕೊಟ್ಟರು. ಪ್ರಮಾಣವಚನ ಸ್ವೀಕರಿಸಿದ ನಂತರ ಚಂದ್ರಶೇಖರ್ ಕೆಲವು ಘೋಷಣೆಗಳನ್ನು ಕೂಗಿದರು. ಅದನ್ನು ಮುಗಿಸಿದ ಕೂಡಲೇ ಆಡಳಿತಾರೂಢ ಪಕ್ಷದ ಕಡೆಯಿಂದ, ಭಾಷಣವನ್ನೇ ಆಡೋ ಹಾಗಿದೆ ಎಂಬ ಕೊಂಕು ಕೇಳಿ ಬಂತು. ಅದಕ್ಕೆ ಚಂದ್ರಶೇಖರ್ ಖಡಕ್ಕಾಗಿಯೇ, ಹೌದು, ನಾನು ಇಲ್ಲಿಗೆ ಬಂದಿರೋದೇ ಅದಕ್ಕಾಗಿ. ನಾನು ಮಾತನಾಡಲಿದ್ದೇನೆ ಮತ್ತು ನೀವು ಕೇಳಲೇಬೇಕು ಎಂದು ಕಾಲೆಳೆದ ಸಂಸದರ ಬಾಯಿ ಮುಚ್ಚಿಸಿದರು ಚಂದ್ರಶೇಖರ್.
► ಸಂಜನಾ ಜಾಟವ್
PC : PTI
ತುಂಬಾ ಚರ್ಚೆಯಲ್ಲಿರುವ ಇನ್ನೊಬ್ಬರು, ದಲಿತ ಸಂಸದೆ ಸಂಜನಾ ಜಾಟವ್. ಲೋಕಸಭಾ ಚುನಾವಣೆಯ ಫಲಿತಾಂಶಗಳ ನಂತರ ಒಬ್ಬ ಯುವತಿ ಖುಷಿಯಲ್ಲಿ ಡ್ಯಾನ್ಸ್ ಮಾಡುವ ವೀಡಿಯೊ ಒಂದು ತುಂಬಾ ವೈರಲ್ ಆಗಿತ್ತು. ಆ ವೀಡಿಯೊ 26 ವರ್ಷದ ಸಂಜನಾ ಜಾಟವ್ ಅವರದಾಗಿತ್ತು.
ಸಂಜನಾ ರಾಜಸ್ಥಾನದ ಭರತ್ ಪುರ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಜನಾ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಕಟ್ಮೂರ್ ನಿವಾಸಿ. 18ನೇ ವಯಸ್ಸಿನಲ್ಲಿ ಕಪ್ತಾನ್ ಸಿಂಗ್ ಎಂಬ ಪೊಲೀಸ್ ಕಾನ್ಸ್ಟೇಬಲ್ ಜೊತೆ ಸಂಜನಾ ಮದುವೆಯಾಗುತ್ತಾರೆ. ಸಂಜನಾ ಅವರ ಮಾವ ಹರ್ಭಜನ್ ಸಿಂಗ್ ಗುತ್ತಿಗೆದಾರರಾಗಿದ್ದಾರೆ. ಹಿರಿಯ ಮಾವ ಕಮಲ್ ಸಿಂಗ್ ಸರಪಂಚರಾಗಿದ್ದಾರೆ. ಅವರೇ ಸಂಜನಾ ರಾಜಕೀಯ ಪ್ರವೇಶಕ್ಕೆ ಪ್ರೇರಣೆ.
2021ರಲ್ಲಿ ನಡೆದ ಅಲ್ವರ್ ಜಿಲ್ಲಾ ಪರಿಷತ್ ಚುನಾವಣೆಗೆ ಸಂಜನಾ ಸ್ಪರ್ಧಿಸಿ, ವಾರ್ಡ್ ನಂಬರ್ 29ರಿಂದ ಚುನಾಯಿತರಾಗುತ್ತಾರೆ. ನಂತರ ತಮ್ಮ ಮಾವನ ಜೊತೆ ಕಾಂಗ್ರೆಸ್ ನಾಯಕರೊಬ್ಬರನ್ನು ಭೇಟಿಯಾಗಲು ಜೈಪುರಕ್ಕೆ ಹೋಗಿದ್ದರು. ಅಲ್ಲಿ ಮೊದಲೇ 150ಕ್ಕಿಂತಲೂ ಹೆಚ್ಚು ಜನ ಸೇರಿದ್ದರು. ಈಕೆಗೆ ನಾಯಕಿಯಾಗಲು ಬಹಳ ತುರ್ತಿದ್ದ ಹಾಗಿದೆ ಎಂದು ಅಣಕಿಸಿ ಅಲ್ಲಿಂದ ಹೊರಹಾಕುತ್ತಾರೆ.
ಈ ಮಾತು ಸಂಜನಾ ಮಾವನಿಗೆ ಇಷ್ಟವಾಗಲಿಲ್ಲ. ಆಕೆಯನ್ನು ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ತೀರ್ಮಾನಿಸುತ್ತಾರೆ. ದೊಡ್ಡ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಶಿಕ್ಷಣದ ಅಗತ್ಯವಿದೆಯೆಂದು ಯೋಚಿಸಿ ಸಂಜನಾ ಎಲ್ ಎಲ್ ಬಿ ಪದವಿಗೆ ಸೇರುತ್ತಾರೆ. ಇನ್ನೊಂದು ಕಡೆ 2023ರ ರಾಜಸ್ಥಾನ ವಿಧಾನಸಭಾ ಚುನಾವಣೆಗೆ "ಲಡ್ಕಿ ಹೂಂ, ಲಡ್ ಸಕ್ತಿ ಹೂಂ" ಅಭಿಯಾನವನ್ನು ಪ್ರಿಯಾಂಕ ಗಾಂಧಿ ಪ್ರಾರಂಭಿಸುತ್ತಾರೆ. ಸಂಜನಾ ಕೂಡ ಈ ಅಭಿಯಾನದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಾರೆ. ಇದೇ ಕಾರಣದಿಂದ ಅವರು ಪ್ರಿಯಾಂಕ ಗಾಂಧಿಯವರ ಗಮನ ಸೆಳೆದು ವಿಧಾನಸಭಾ ಚುನಾವಣೆಗೆ ಟಿಕೆಟ್ ಪಡೆದರು.
ಕಟ್ಮೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಸಂಜನಾ ಕೇವಲ 409 ಮತಗಳಿಂದ ಸೋಲುತ್ತಾರೆ. ಸೋತರೂ ಸಂಜನಾ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಇದರ ಪರಿಣಾಮವಾಗಿಯೇ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅವರಿಗೆ ಭರತ್ ಪುರದಿಂದ ಟಿಕೆಟ್ ನೀಡುತ್ತದೆ. ಸಂಜನಾ 51,983 ಮತಗಳ ಅಂತರದಿಂದ ಗೆದ್ದಿದ್ದಾರೆ.
► ಅವಧೇಶ್ ಪ್ರಸಾದ್ ಪಾಸಿ
PC : PTI
ಇಡೀ ದೇಶದ ಗಮನ ಸೆಳೆದಿರುವ ಇನ್ನೊಂದು ಪ್ರಮುಖ ಹೆಸರು ಅವಧೇಶ್ ಪ್ರಸಾದ್ ಪಾಸಿ. ಅವರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ವೇದಿಕೆಯ ಕಡೆಗೆ ಹೋದಾಗ ಸದನದಲ್ಲಿ ಹಲವು ಸಂಸದರು ಎದ್ದು ನಿಂತು ಜೋರಾಗಿ ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಪ್ರಮಾಣವಚನ ಸ್ವೀಕರಿಸಿದ ನಂತರ ನೇತಾಜಿ ಅಮರ್ ರಹೇ, ಮುಲಾಯಮ್ ಸಿಂಗ್ ಯಾದವ್ ಅಮರ್ ರಹೇ ಎಂಬ ಘೋಷಣೆಯನ್ನು ಅವಧೇಶ್ ಪ್ರಸಾದ್ ಕೂಗಿದರು.
ಎಸ್‌ಪಿಯ ಪ್ರಮುಖ ದಲಿತ ಮುಖಗಳಲ್ಲೊಬ್ಬರಾದ, ಒಂಭತ್ತು ಬಾರಿ ಶಾಸಕರಾಗಿರುವ ಅವಧೇಶ್ ಪ್ರಸಾದ್ ಅವರು ಈ ಬಾರಿ ಅಯೋಧ್ಯೆ ಇರುವ ಫೈಜಾಬಾದ್ ಲೋಕಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಮರು ಆಯ್ಕೆ ಬಯಸಿದ್ದ ಲಲ್ಲು ಸಿಂಗ್ ಅವರನ್ನು 54,567 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಸಂದರ್ಶನವೊಂದರಲ್ಲಿ ಅವಧೇಶ್ ಹೇಳಿರುವಂತೆ, 10ನೇ ತರಗತಿ ತೇರ್ಗಡೆಯಾದ ನಂತರ ತಮ್ಮ ಫೀಸನ್ನು ಮನ್ನಾ ಮಾಡಿಸಲು ಅವರೊಬ್ಬ ಸಂಸದರನ್ನು ಸಂಪರ್ಕಿಸಿದರು. ಆದರೆ ಆ ಸಂಸದರು ಅವಧೇಶ್ ರನ್ನು ಅವಮಾನಕರ ರೀತಿಯಲ್ಲಿ ನಡೆಸಿಕೊಂಡರು. ಇದರಿಂದ ತೀವ್ರ ಸಿಟ್ಟಾದ ಯುವ ಅವಧೇಶ್ ಅದೇ ಸಂಸದರ ಬಳಿ ಕುಳಿತು ಒಂದು ಪೇಪರ್ ನಲ್ಲಿ ಅವಧೇಶ್ ಪ್ರಸಾದ್ ಎಲ್ ಎಲ್ ಬಿ, ಅಡ್ವೊಕೇಟ್, ಶಾಸಕ, ಸಂಸದ ಗೃಹ ಮಂತ್ರಿ ಎಂದು ಬರೆದುಕೊಳ್ಳುತ್ತಾರೆ. ಆ ಕಾಗದದಲ್ಲಿ ಬರೆದದ್ದರಲ್ಲಿ ಗೃಹಮಂತ್ರಿ ಒಂದು ಬಿಟ್ಟರೆ ಬೇರೆ ಎಲ್ಲ ಹುದ್ದೆಗಳನ್ನು ಅವಧೇಶ್ ಪ್ರಸಾದ್ ತಮ್ಮ ಸುದೀರ್ಘ ರಾಜಕೀಯದಲ್ಲಿ ಪಡೆದಿದ್ದಾರೆ.
1968ರಲ್ಲಿ ಅವರು ವಕೀಲ ವೃತ್ತಿ ಪ್ರಾರಂಭಿಸುತ್ತಾರೆ. ಅದೇ ಸಮಯದಲ್ಲಿ ರಾಜಕೀಯದಲ್ಲೂ ಸಕ್ರಿಯರಾಗುತ್ತಾರೆ. 1974ರಲ್ಲಿ ಮೊದಲನೇ ಬಾರಿಗೆ ಅವರು ಚುನಾವಣಾ ಕಣಕ್ಕಿಳಿದು ಸೋಲನುಭವಿಸುತ್ತಾರೆ. 1977ರಲ್ಲಿ ಅಯೋಧ್ಯೆ ಜಿಲ್ಲೆಯ ಸೊಹಾವಾಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುತ್ತಾರೆ. ಆಮೇಲೆ ಅದೇ ಕ್ಷೇತ್ರದಲ್ಲಿ ಸತತ ಏಳು ಬಾರಿ ಹಾಗು ಒಟ್ಟು ಒಂಭತ್ತು ಬಾರಿ ಶಾಸಕರಾಗಿ ಚುನಾಯಿತರಾಗುತ್ತಾರೆ. ಆರು ಬಾರಿ ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗಿಯೂ ಸೇವೆ ಸಲ್ಲಿಸುತ್ತಾರೆ.
ಅವಧೇಶ್ ಪಾಸಿ ದೀರ್ಘಕಾಲದಿಂದ ಸಮಾಜವಾದಿ ಪಕ್ಷದೊಂದಿಗಿದ್ದಾರೆ. ಅವರು ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರಿಗೆ ಬಹಳ ಆಪ್ತರಾಗಿದ್ದವರು.
ಈಗ ಅಯೋಧ್ಯೆಯಲ್ಲೇ ಬಿಜೆಪಿಯನ್ನು ಸೋಲಿಸಿದ ಕೀರ್ತಿಯ ಅವಧೇಶ್ ಪ್ರಸಾದ್ ಅವರು ಲೋಕಸಭೆಯಲ್ಲಿ ವಿಪಕ್ಷಗಳ ಮೊದಲ ಸಾಲಿನಲ್ಲೇ ಅಖಿಲೇಶ್ ಪಕ್ಕ ಕೂತು ಮಿಂಚುತ್ತಿದ್ದಾರೆ.
►ಚಿರಾಗ್ ಪಾಸ್ವಾನ್
PC : PTI
ಯುವ ನಾಯಕ ಬಿಹಾರದ ಮಾಜಿ ಕೇಂದ್ರ ಮಂತ್ರಿ ರಾಮ ವಿಲಾಸ್ ಪಾಸ್ವಾನ್ ಅವರ ಮಗ ಚಿರಾಗ್ ಪಾಸ್ವಾನ್ ಈಗ ಕೇಂದ್ರ ಮಂತ್ರಿ. ಸತತವಾಗಿ 2ನೇ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಲೋಕ ಜನಶಕ್ತಿ ಪಕ್ಷ ನೂರಕ್ಕೆ ನೂರು ಶೇ. ಗೆಲುವಿನ ದಾಖಲೆ ಬರೆದಿದೆ. 2019ರಲ್ಲಿ ಸ್ಪರ್ಧಿಸಿದ್ದ ಎಲ್ಲಾ ಆರು ಸೀಟುಗಳಲ್ಲಿ ಜಯ ಸಾಧಿಸಿದ್ದ ಚಿರಾಗ್ ಪಾಸ್ವಾನ್ ಪಕ್ಷ, 2024ರ ಚುನಾವಣೆಯಲ್ಲೂ ಸ್ಪರ್ಧಿಸಿದ ಐದೂ ಸೀಟುಗಳನ್ನು ಗೆದ್ದಿದೆ. ಅವರೀಗ ಕೇಂದ್ರ ಮಂತ್ರಿಯೂ ಆಗಿದ್ದಾರೆ. ಚಿರಾಗ್ ಸತತ ಮೂರನೇ ಬಾರಿ ಗೆದ್ದು ಈಗ ಕ್ಯಾಬಿನೆಟ್ ಸಚಿವರಾಗಿದ್ದಾರೆ.
► ಪಂಜಾಬಿನ ಮಾಜಿ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ
PC : PTI
ಪಂಜಾಬಿನ ಮೊದಲ ದಲಿತ ಸಿಎಂ ಎಂಬ ಹೆಗ್ಗಳಿಕೆಯೂ ಚರಣ್ ಜಿತ್ ಸಿಂಗ್ ಚನ್ನಿ ಅವರದ್ದು. ಚನ್ನಿ 2007ರಲ್ಲಿ ಮೊದಲ ಸಲ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು. 2015-16ರಲ್ಲಿ ವಿಧಾನಸಭೆ ವಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
2024ರ ಚುನಾವಣೆಯಲ್ಲಿ ಪಂಜಾಬಿನ ಜಲಂಧರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ, ಬಿಜೆಪಿಯ ಸುಶೀಲ್ ಕುಮಾರ್ ರಿಂಕು ಅವರನ್ನು 1,75,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರು.
► ಶಾಂಭವಿ ಚೌಧರಿ
PC : PTI
ಈ ಲೋಕಸಭೆಯ ಅತಿ ಕಿರಿಯ ಸಂಸದರಲ್ಲೊಬ್ಬರಾಗಿರುವ, ಶಾಂಭವಿ ಚೌಧರಿ ಅವರು ಬಿಹಾರ ಸರಕಾರದಲ್ಲಿ ಮಂತ್ರಿಯಾಗಿರುವ ಅಶೋಕ್ ಚೌಧರಿ ಅವರ ಪುತ್ರಿ. ಪರಿಶಿಷ್ಟ ಜಾತಿಗೆ ಮೀಸಲಾದ ಬಿಹಾರದ ಸಮಸ್ತಿಪುರ ಲೋಕಸಭಾ ಕ್ಷೇತ್ರದಿಂದ ಶಾಂಭವಿ ಗೆದ್ದಿದ್ದಾರೆ.
► ಕುಮಾರಿ ಶೈಲಜಾ
PC ; PTI
1990ರಲ್ಲಿ ಮಹಿಳಾ ಕಾಂಗ್ರೆಸ್ ನಿಂದ ರಾಜಕೀಯ ವೃತ್ತಿ ಜೀವನ ಪ್ರಾರಂಭಿಸಿದ ಕುಮಾರಿ ಶೈಲಜಾ ಅಥವಾ ಶೆಲ್ಜಾ , ಹಲವು ಬಾರಿ ಕೇಂದ್ರ ಸರಕಾರದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದವರು.
1991ರಲ್ಲಿ ಸಿರ್ಸಾ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಕುಮಾರಿ ಶೈಲಜಾ ಸಂಸದರಾಗಿ ನರಸಿಂಹರಾವ್ ಕ್ಯಾಬಿನೆಟ್ ನಲ್ಲಿ ಶಿಕ್ಷಣ ಖಾತೆ ರಾಜ್ಯ ಸಚಿವೆಯಾಗಿ ಸೇವೆ ಸಲ್ಲಿಸಿದರು. ಗಾಂಧಿ ಪರಿವಾರದ ಆಪ್ತರಲ್ಲಿ ಶೈಲಜಾ ಕೂಡ ಒಬ್ಬರು. ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯರಾಗಿದ್ದಾರೆ. 2014ರಿಂದ 2020ರವರೆಗೆ ಹರಿಯಾಣದಿಂದ ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕಳೆದ ಹರಿಯಾಣ ವಿಧಾನಸಭಾ ಚುನಾವಣೆಯ ಮುಂಚೆ ಇವರನ್ನು ಹರಿಯಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. 2022ರವರೆಗೆ ಆ ಹುದ್ದೆಯಲ್ಲಿದ್ದರು. ಕಾಂಗ್ರೆಸ್ನ ಪ್ರಮುಖ ದಲಿತ ನಾಯಕರಲ್ಲಿ ಶೈಲಜಾ ಒಬ್ಬರು.
2024ರ ಚುನಾವಣೆಯಲ್ಲಿ ತಮ್ಮ ಸಮೀಪದ ಎದುರಾಳಿ, ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಹೋಗಿದ್ದ ಅಶೋಕ್ ತನ್ವರ್ ಅವರನ್ನು 2,68,000 ಮತಗಳ ಅಂತರದಿಂದ ಸಿರ್ಸಾ ಲೋಕಸಭಾ ಕ್ಷೇತ್ರದಲ್ಲಿ ಸೋಲಿಸಿ ಕುಮಾರಿ ಶೈಲಜಾ ಮತ್ತೊಮ್ಮೆ ಸಂಸದರಾಗಿದ್ದಾರೆ.
► ಡಾ.ವೀರೇಂದ್ರ ಕುಮಾರ್
PC : FACEBOOK
ಬಿಜೆಪಿ ನಾಯಕ ಡಾ.ವೀರೇಂದ್ರ ಕುಮಾರ್ 8ನೇ ಬಾರಿಗೆ ಲೋಕಸಭಾ ಸದಸ್ಯರಾಗಿ ಚುನಾಯಿತರಾಗಿದ್ದಾರೆ.
11, 12, 13 ಮತ್ತು 14ನೇ ಲೋಕಸಭೆಯಲ್ಲಿ ಅವರು 1996 ಮತ್ತು 2009ರ ನಡುವೆ ಮಧ್ಯಪ್ರದೇಶದ ಸಾಗರ್ ಕ್ಷೇತ್ರವನ್ನು ಪ್ರತಿನಿಧಿಸಿದರು. 15, 16 ಮತ್ತು 17 ನೇ ಲೋಕಸಭೆಯಲ್ಲಿ ಮಧ್ಯಪ್ರದೇಶದ ಟಿಕಮ್‌ಗಢ ಕ್ಷೇತ್ರವನ್ನು ಪ್ರತಿನಿಧಿಸಿದರು. ಈ ಬಾರಿಯೂ ಅದೇ ಕ್ಷೇತ್ರದಿಂದ ತಮ್ಮ ಸಮೀಪದ ಎದುರಾಳಿ ಕಾಂಗ್ರೆಸ್ನ ಪಂಕಜ್ ಅಹಿರ್ವಾರ್ ಅವರನ್ನು ನಾಲ್ಕು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಅವರು ಆರೆಸ್ಸೆಸ್, ಎಬಿವಿಪಿ ಮತ್ತು ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದೀಗ ಮೋದಿ ಸರಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯೂ ಆಗಿದ್ದಾರೆ.
► ಪುಷ್ಪೇಂದ್ರ ಸರೋಜ್
PC : instagram.com / pushpendrasarojsp
ಲಂಡನ್ ನಿಂದ ಲೆಕ್ಕ ಪರಿಶೋಧನೆ ಹಾಗು ಮ್ಯಾನೇಜ್ ಮೆಂಟ್ ನಲ್ಲಿ ಪದವಿ ಪಡೆದಿರುವ ಪುಷ್ಪೇಂದ್ರ ಸರೋಜ್ ಮತ್ತೊಂದು ಮುಖ್ಯ ಹೆಸರು. ಉತ್ತರಪ್ರದೇಶದ ಕೌಶಾಂಬಿ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ ಕೇವಲ 25 ವರ್ಷದ ಪುಷ್ಪೇಂದ್ರ ಸರೋಜ್ ಬಿಜೆಪಿಯ ದಿಗ್ಗಜ ನಾಯಕ ವಿನೋದ್ ಸೋಂಕರ್ ಅವರನ್ನು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ಧಾರೆ. ಇವರು ಈ ಸಲದ ಅತಿ ಕಿರಿಯ ಸಂಸದರಾಗಿದ್ದಾರೆ. ಇವರ ತಂದೆ ಇಂದ್ರಜಿತ್ ಸರೋಜ್ ಎಸ್ಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ.
► ಪ್ರಣಿತಿ ಶಿಂಧೆ
PC : instagram.com / pranitisshinde
ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ ಅವರ ಪುತ್ರಿ ಪ್ರಣಿತಿ ಶಿಂಧೆ. ಪ್ರಣಿತಿ ತಮ್ಮ ಸಮೀಪದ ಎದುರಾಳಿ ಬಿಜೆಪಿಯ ರಾಮ್ ಸತ್ಪುತೆ ಅವರನ್ನು 74,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಾಪುರ್ ಲೋಕಸಭಾ ಕ್ಷೇತ್ರದಲ್ಲಿ ಸೋಲಿಸಿದ್ದಾರೆ. ಸೋಲಾಪುರ್ ಲೋಕಸಭಾ ಕ್ಷೇತ್ರದಿಂದ ಚುನಾವಣೆ ಗೆದ್ದಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಪ್ರಮಾಣವಚನ ಸ್ವೀಕರಿಸುವಾಗ ರಾಹುಲ್ ಗಾಂಧಿ ತಾವೇ ಮುಂದಾಗಿ ಪ್ರಣಿತಿಯವರಿಗೆ ಹಸ್ಲಲಾಘವ ನೀಡಿ ಅಭಿನಂದಿಸಿದರು.