ಸರಣಿ ಹುಸಿ ಬಾಂಬ್ ಬೆದರಿಕೆ ಹಾಕಿದ ವ್ಯಕ್ತಿಯಿಂದ ಪಿಎಂ ಕಚೇರಿಗೆ 100 ಇ-ಮೇಲ್!
ಆರೋಪಿ ಜಗದೀಶ್ ಉಯಿಕೆಯನ್ನು ಪೊಲೀಸರು ಬಂಧಿಸಿರುವುದು ಹಾಗೂ ಆತನ ಪುಸ್ತಕ "ಆತಂಕ್ವಾದ್-ಏಕ್ ತೂಫಾನಿ ರಾಕ್ಷಸ್"PC: x.com/NagpurTehelka
ನಾಗ್ಪುರ: ಪ್ರಧಾನಿ ಕಚೇರಿ, ಉನ್ನತ ಸರ್ಕಾರಿ ಕಚೇರಿಗಳು, ವಿಮಾನಗಳು ಮತ್ತು ರೈಲುಗಳಿಗೆ 354 ಹುಸಿ ಬಾಂಬ್ ಬೆದರಿಕೆ ಸಂದೇಶವನ್ನು ಕಳುಹಿಸಿದ ಆರೋಪದಲ್ಲಿ ಮಹಾರಾಷ್ಟ್ರದ ನಕ್ಸಲ್ ಪೀಡಿತ ಜಿಲ್ಲೆಯ ನಿವಾಸಿ ಜಗದೀಶ್ ಉಯಿಕೆ (37) ಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಜನವರಿಯಿಂದೀಚೆಗೆ ಜಗದೀಶ್ ಉಯಿಕೆ ಪಿಎಂ ಕಚೇರಿ ಮತ್ತು ಇತರ ಉನ್ನತ ಕಚೇರಿಗಳಿಗೆ 100ಕ್ಕೂ ಹೆಚ್ಚು ಇ-ಮೇಲ್ಗಳನ್ನು ಕಳುಹಿಸಿದ್ದ. ಭಯೋತ್ಪಾದನೆ ಕುರಿತ ತನ್ನ ಪುಸ್ತಕ "ಆತಂಕ್ವಾದ್-ಏಕ್ ತೂಫಾನಿ ರಾಕ್ಷಸ್' (ಉಗ್ರವಾದ ಒಂದು ರಕ್ಕಸ ಬಿರುಗಾಳಿ) ಎಂಬ ಕೃತಿಯನ್ನು ಅನುಮೋದಿಸುಂತೆ ಕೋರಿದ್ದ ಎಂದು ನಾಗ್ಪುರ ಸೈಬರ್ ಅಪರಾಧ ವಿಭಾಗದ ಡಿಸಿಪಿ ಲೋಹಿತ್ ಮತಾನಿ ಹೇಳಿದ್ದಾರೆ.
"ಮೇಲ್ನೋಟಕ್ಕೆ ಆತ ಪಿಎಂ ಕಚೇರಿ ಮತ್ತು ಇತರರಿಗೆ ಪದೇ ಪದೇ ಇ-ಮೇಲ್ ಕಳುಹಿಸುವ ಮೂಲಕ ತನ್ನ ಪುಸ್ತಕವನ್ನು ಪ್ರಕಟಿಸಲು ಕೋರಿದ್ದ. ಆದರೆ ಕೊನೆಗೆ ಹತಾಶನಾಗಿ ಹುಸಿ ಬಾಂಬ್ ಕರೆಗಳನ್ನು ಕಳುಹಿಸಲು ಆರಂಭಿಸಿದ" ಎಂದು ಪೊಲೀಸ್ ಆಯುಕ್ತ ರವೀಂದ್ರ ಸಿಂಗಾಲ್ ಹೇಳಿದ್ದಾರೆ. ಇದು ಇಂಟರ್ ನೆಟ್ನಲ್ಲಿ ಲಭ್ಯವಿರುವ ಉಗ್ರವಾದ ಸಿದ್ಧಾಂತಗಳ ಮಾಹಿತಿ ಸಂಕಲನ ಎಂದು ಹೆಚ್ಚುವರಿ ಸಿಪಿ ಸಂಜಯ್ ಪಾಟೀಲ್ ವಿವರಿಸಿದ್ದಾರೆ.
ಉಯಿಕೆ ಪೊಲೀಸರ ಜತೆ ಮುಖಾಮುಖಿಯಾಗುವುದು ಇದೇ ಮೊದಲಲ್ಲ. ಸಿಂಗಾಲ್ ಅವರ ಪ್ರಕಾರ, ಉದ್ಯೋಗಾಕಾಂಕ್ಷಿಗಳು ಮತ್ತು ಪಿಎಂ ಕಚೇರಿ ನಡುವೆ ಸಂಬಂಧವಿದೆ ಎಂದು ದೂರು ನೀಡಿದ್ದ ಈ ಅಸಮಂಜಸ ಇ-ಮೇಲ್ಗಳನ್ನು ಕಳುಹಿಸಿದ ಕಾರಣಕ್ಕಾಗಿ ಎರಡು ಬಾರಿ ಈತನನ್ನು ವಿಚಾರಣೆಗೆ ಗುರಿಪಡಿಸಲಾಗಿತ್ತು.