ದೆಹಲಿ ಕಾಲ್ತುಳಿತದ ದಿನ 13 ಸಾವಿರ ಸಾಮಾನ್ಯ ಟಿಕೆಟ್ ಹೆಚ್ಚುವರಿ ಮಾರಾಟ: ಅಶ್ವಿನಿ ವೈಷ್ಣವ್

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ PC: PTI
ಹೊಸದಿಲ್ಲಿ: ರೈಲು ನಿಲ್ದಾಣದಲ್ಲಿ 18 ಮಂದಿಯ ಸಾವಿಗೆ ಕಾರಣವಾದ ಕಾಲ್ತುಳಿತ ಘಟನೆ ನಡೆದ ಫೆಬ್ರುವರಿ 15ರಂದು, ಪ್ರತಿ ದಿನ ನಿಲ್ದಾಣದಲ್ಲಿ ಮಾರಾಟವಾಗುವ ಸರಾಸರಿ ಸಾಮಾನ್ಯ ಟಿಕೆಟ್ ಗಳಿಗಿಂತ 13 ಸಾವಿರ ಹೆಚ್ಚುವರಿ ಟಿಕೆಟ್ ಮಾರಾಟವಾಗಿತ್ತು ಎಂದು ಸರ್ಕಾರ ಗುರುವಾರ ಲೋಕಸಭೆಗೆ ತಿಳಿಸಿದೆ.
"ನವದೆಹಲಿ ರೈಲು ನಿಲ್ದಾಣದಲ್ಲಿ ಫೆಬ್ರುವರಿ 15ರಂದು ಸುಮಾರು 49 ಸಾವಿರ ಸಾಮಾನ್ಯ ಟಿಕೆಟ್ ಮಾರಾಟವಾಗಿತ್ತು. ಇದು ಹಿಂದಿನ ಆರು ತಿಂಗಳ ದೈನಿಕ ಸರಾಸರಿಗಿಂತ 13 ಸಾವಿರದಷ್ಟು ಅಧಿಕ" ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಟಿಎಂಸಿ ಸದಸ್ಯೆ ಮಾಲಾ ರಾಯ್ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.
"ಈ ಹೆಚ್ಚುವರಿ ಪ್ರಯಾಣಿಕರಿಗೆ ಸೇವೆ ಒದಗಿಸುವ ದೃಷ್ಟಿಯಿಂದ ಐದು ಕುಂಭ ವಿಶೇಷ ರೈಲುಗಳು ನವದೆಹಲಿ ನಿಲ್ದಾಣದಿಂದ ಸಂಚರಿಸಿದ್ದು, ತಲಾ 3 ಸಾವಿರ ಮಂದಿ ಇದರಲ್ಲಿ ಪ್ರಯಾಣಿಸಿದ್ದಾರೆ" ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ನಿರ್ದಿಷ್ಟ ದಿನದಂದು ನಿರ್ದಿಷ್ಟ ನಿಲ್ದಾಣದಲ್ಲಿ ಖರೀದಿಸಿದ, ಕಾಯ್ದಿರಿಸದ ಟಿಕೆಟ್ ಗಳು ಆ ನಿಲ್ದಾಣದ್ದಾಗಿರಬಹುದು ಅಥವಾ ಬೇರೆ ನಿಲ್ದಾಣದ್ದೂ ಆಗಿರಬಹುದು ಎಂದು ವಿವರಿಸಿದರು.
ಹೆಚ್ಚುವರಿ 15 ಸಾವಿರ ಪ್ರಯಾಣಿಕರು ತೆರಳಲು ವಿಶೇಷ ರೈಲುಗಳು ಸಾಕಾಗಿತ್ತು ಎಂದು ಅವರು ಸಮರ್ಥಿಸಿದರು. ಘಟನೆ ಬಳಿಕ ವಿಚಾರಣೆ ಕಾಯ್ದಿರಿಸಿ ವಿಭಾಗೀಯ ಮತ್ತು ಹೆಚ್ಚುವರಿ ವಿಭಾಗೀಯ ಪ್ರಬಂಧಕರನ್ನು ಮತ್ತು ನಿಲ್ದಾಣ ನಿರ್ದೇಶಕರು ಹಾಗೂ ಹಿರಿಯ ವಿಭಾಗೀಯ ವಾಣಿಜ್ಯ ಪ್ರಬಂಧಕರನ್ನು ವರ್ಗಾವಣೆ ಮಾಡಲಾಗಿದೆ ಎಂದು ಸಚಿವರು ಬಹಿರಂಗಪಡಿಸಿದರು.