151 ಹಾಲಿ ಸಂಸದರು, ಶಾಸಕರು ಮಹಿಳಾ ಪೀಡಕರು!
16 ಮಂದಿ ಅತ್ಯಾಚಾರಿಗಳು, ಬಿಜೆಪಿಯವರೇ ಹೆಚ್ಚು ; ಎಡಿಆರ್ ವರದಿ
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: 151 ಹಾಲಿ ಸಂಸದರು ಹಾಗೂ ಶಾಸಕರು ಸಲ್ಲಿಸಿರುವ ಚುನಾವಣಾ ಪ್ರಮಾಣ ಪತ್ರದ ಪ್ರಕಾರ, ಅವರ ವಿರುದ್ಧ ಮಹಿಳೆಯರ ಮೇಲೆ ಅಪರಾಧವೆಸಗಿದ ಪ್ರಕರಣಗಳಿದ್ದು, ಈ ಪೈಕಿ 16 ಮಂದಿಯ ವಿರುದ್ಧ ಅತ್ಯಾಚಾರದಂಥ ಗಂಭೀರ ಪ್ರಕರಣಗಳು ದಾಖಲಾಗಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯಲ್ಲಿ ಹೇಳಲಾಗಿದೆ.
ಮಹಿಳೆಯರ ಮೇಲೆ ಅಪರಾಧ ಕೃತ್ಯ ನಡೆಸಿದ ಆರೋಪಗಳಿಗೆ ತುತ್ತಾಗಿರುವ ಹಾಲಿ ಸಂಸದರು ಹಾಗೂ ಶಾಸಕರ ಪೈಕಿ ಬಿಜೆಪಿಯ ಸಂಸದರು ಹಾಗೂ ಶಾಸಕರು ಗರಿಷ್ಠ (54 ಸಂಸದರು ಮತ್ತು ಶಾಸಕರು) ಪ್ರಮಾಣದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದ ಸಂಸದರು ಹಾಗೂ ಶಾಸಕರು (23) ಹಾಗೂ ತೆಲುಗು ದೇಶಂ ಪಕ್ಷದ ಸಂಸದರು ಹಾಗೂ ಸಂಸದರು ಮತ್ತು ಶಾಸಕರು (17) ಇದ್ದಾರೆ ಎಂದು ವರದಿ ಹೇಳಿದೆ.
ಈ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ತಲಾ ಐವರ ಮೇಲೆ ಅತ್ಯಾಚಾರದಂಥ ಗಂಭೀರ ಪ್ರಕರಣಗಳಿವೆ ಎಂದು ಹೇಳಲಾಗಿದೆ.
ಈ ವರದಿಯನ್ನು ಸಿದ್ಧಪಡಿಸಲು 2019ರಿಂದ 2024ರ ನಡುವೆ ಚುನಾವಣಾ ಆಯೋಗಕ್ಕೆ ಪ್ರಮಾಣ ಪತ್ರ ಸಲ್ಲಿಸಿರುವ 4,809 ಹಾಲಿ ಸಂಸದರು ಹಾಗೂ ಶಾಸಕರ ಪೈಕಿ 4,693 ಸಂಸದರು ಮತ್ತು ಶಾಸಕರ ಪ್ರಮಾಣ ಪತ್ರಗಳನ್ನು ಎಡಿಆರ್ ಸಂಸ್ಥೆ ಪರಿಶೀಲಿಸಿದೆ. ಈ ಪೈಕಿ ಪಶ್ಚಿಮ ಬಂಗಾಳದ ಸಂಸದರು ಹಾಗೂ ಶಾಸಕರ ವಿರುದ್ಧ ಗರಿಷ್ಠ ಪ್ರಮಾಣದ ಮಹಿಳೆಯರ ಮೇಲೆ ಅಪರಾಧ ಕೃತ್ಯವೆಸಗಿದ ಪ್ರಕರಣಗಳು ದಾಖಲಾಗಿವೆ. ಎಡಿಆರ್ ಸಂಸ್ಥೆಯ ಪ್ರಕಾರ, 16 ಹಾಲಿ ಸಂಸದರು ಹಾಗೂ 135 ಹಾಲಿ ಶಾಸಕರ ವಿರುದ್ಧ ಮಹಿಳೆಯರ ಮೇಲೆ ಅಪರಾಧ ಕೃತ್ಯವೆಸಗಿದ ಪ್ರಕರಣಗಳು ದಾಖಲಾಗಿವೆ.
ಮಹಿಳೆಯರ ಮೇಲೆ ಅಪರಾಧ ಕೃತ್ಯಗಳನ್ನೆಸಗಿದ ಹಾಲಿ ಸಂಸದರು ಹಾಗೂ ಶಾಸಕರ ಪಟ್ಟಿಯಲ್ಲಿ ಪಶ್ಚಿಮ ಬಂಗಾಳ ಮುಂಚೂಣಿಯಲ್ಲಿದ್ದು, ಈ ರಾಜ್ಯದ 25 ಹಾಲಿ ಸಂಸದರು ಹಾಗೂ ಶಾಸಕರ ವಿರುದ್ಧ ಮಹಿಳೆಯರ ಮೇಲೆ ಅಪರಾಧ ಕೃತ್ಯ ನಡೆಸಿದ ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ (21) ಹಾಗೂ ಒಡಿಶಾ (17) ರಾಜ್ಯಗಳಿವೆ.
ಕೋಲ್ಕತ್ತಾದ ಸರಕಾರಿ ಆಸ್ಪತ್ರೆಯಲ್ಲಿ ತರಬೇತಿ ನಿರತ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಹಾಗೂ ಥಾಣೆಯಲ್ಲಿ ಇಬ್ಬರು ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಿಗೇ ಈ ವರದಿ ಬಿಡುಗಡೆಗೊಂಡಿದೆ.
ವರದಿಯ ಪ್ರಕಾರ, ಕನಿಷ್ಠ 10 ವರ್ಷಗಳ ಶಿಕ್ಷೆಯಿಂದ ಹಿಡಿದು ಜೀವಾವಧಿ ಶಿಕ್ಷೆಯವರೆಗೆ ವಿಸ್ತರಿಸಬಹುದಾದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376ರ ಅಡಿ ತಮ್ಮ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು 16 ಸಂಸದರು ಹಾಗೂ ಶಾಸಕರು ತಮ್ಮ ಚುನಾವಣಾ ಪ್ರಮಾಣ ಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ. ಈ ಪೈಕಿ ಇಬ್ಬರು ಸಂಸದರಾದರೆ, 14 ಮಂದಿ ಶಾಸಕರು ಎನ್ನಲಾಗಿದೆ.
ಈ ಪ್ರಕರಣಗಳ ಪೈಕಿ ಒಬ್ಬರೇ ಸಂತ್ರಸ್ತರ ಮೇಲೆ ಪುನರಾವರ್ತಿತ ಅಪರಾಧ ಕೃತ್ಯಗಳು ನಡೆದಿರುವ ಆರೋಪಗಳಿದ್ದು, ಈ ಪ್ರಕರಣಗಳ ಗಂಭೀರ ಸ್ವರೂಪವನ್ನು ಸೂಚಿಸುತ್ತಿವೆ.
ಈ ಶೋಧನೆಗಳ ಆಧಾರದಲ್ಲಿ ಚುನಾವಣಾ ಹಕ್ಕು ಸಂಸ್ಥೆಯಾದ ಎಡಿಆರ್ ಬಲವಾದ ಶಿಫಾರಸುಗಳನ್ನು ಮಾಡಿದೆ. ಅಪರಾಧ ಹಿನ್ನೆಲೆ ಇರುವವರಿಗೆ, ವಿಶೇಷವಾಗಿ ಅತ್ಯಾಚಾರ ಹಾಗೂ ಮಹಿಳೆಯರ ಮೇಲೆ ಅಪರಾಧ ಕೃತ್ಯವೆಸಗಿದ ಆರೋಪಗಳಿರುವ ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷಗಳು ಟಿಕೆಟ್ ನೀಡುವುದರಿಂದ ದೂರ ಉಳಿಯಬೇಕು ಎಂದು ಒತ್ತಿ ಹೇಳಿದೆ.
ಪೊಲೀಸರಿಂದ ವೃತ್ತಿಪರ ಹಾಗೂ ಆಳವಾದ ತನಿಖೆ ನಡೆಸುವ ಮೂಲಕ ಸಂಸದರು ಹಾಗೂ ಶಾಸಕರ ವಿರುದ್ಧ ಇರುವ ಪ್ರಕರಣಗಳನ್ನು ತ್ವರಿತ ನ್ಯಾಯಾಲಯಗಳಲ್ಲಿ ಇತ್ಯರ್ಥಪಡಿಸಬೇಕು ಎಂದು ವರದಿಯಲ್ಲಿ ಆಗ್ರಹಿಸಲಾಗಿದೆ.
ಇಂತಹ ಆರೋಪಗಳಿರುವ ಅಭ್ಯರ್ಥಿಗಳನ್ನು ಚುನಾಯಿಸುವುದರಿಂದ ಮತದಾರರು ದೂರ ಉಳಿಯಬೇಕು ಎಂದೂ ಎಡಿಆರ್ ಸಂಸ್ಥೆ ಮನವಿ ಮಾಡಿದೆ.