ಆಂಧ್ರ ಫಾರ್ಮಾ ಕಂಪನಿಯಲ್ಲಿ ಸ್ಫೋಟ: ಮೃತರ ಸಂಖ್ಯೆ 17ಕ್ಕೇರಿಕೆ, 41 ಮಂದಿಗೆ ಗಾಯ
Photo: X/ @umasudhir
ಅಮರಾವತಿ: ಆಂಧ್ರಪ್ರದೇಶದ ಅನಕಪಳ್ಳಿ ಎಂಬಲ್ಲಿ ಫಾರ್ಮಾಸ್ಯೂಟಿಕಲ್ ಕಂಪನಿಯೊಂದಲ್ಲಿ ಬುಧವಾರ ಸಂಭವಿಸಿದ ಭೀಕರ ಸ್ಫೋಟದಿಂದ ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ. ಇತರ 41 ಮಂದಿ ಗಾಯಗೊಂಡಿದ್ದಾರೆ. ಅಚ್ಚುತಪುರಂ ವಿಶೇಷ ಆರ್ಥಿಕ ವಲಯದಲ್ಲಿ ಈ ದುರ್ಘಟನೆ ಸಂಭವಿಸಿದೆ.
ವಿಶೇಷ ಆರ್ಥಿಕ ವಲಯದ ಎಸೆನ್ಷಿಯಾ ಕಂಪನಿಯ ಫಾರ್ಮಾ ಘಟಕದಲ್ಲಿ ಸ್ಫೋಟ ಸಂಭವಿಸಿದೆ. ಗಾಯಾಳುಗಳನ್ನು ಎನ್ಟಿಆರ್ ಆಸ್ಪತ್ರೆಗೆ ಸಾಗಿಸಲಾಗಿದೆ. "ಈ ಘಟನೆ ರಿಯಾಕ್ಟರ್ ಸ್ಫೋಟದಿಂದ ಸಂಭವಿಸಿಲ್ಲ" ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ವಿದ್ಯುತ್ ಸಂಬಂಧಿ ಬೆಂಕಿ ಈ ಸ್ಫೋಟಕ್ಕೆ ಕಾರಣ ಎಂದು ಅಧಿಕಾರಿಗಳು ಶಂಕಿಸಿದ್ದು, ಘಟನೆ ನಡೆದಾಗ ಸುಮಾರು 380 ಮಂದಿ ಕಾರ್ಮಿಕರು ಎರಡು ಶಿಫ್ಟ್ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಮಧ್ಯಾಹ್ನ 2.15ರ ವೇಳೆಗೆ ಭೋಜನ ವಿರಾಮವಾಗಿದ್ದರಿಂದ ಬಹಳಷ್ಟು ಮಂದಿ ಹೊರಗಿದ್ದ ಕಾರಣ ಭೀಕರ ದುರಂತ ತಪ್ಪಿದೆ. ದಟ್ಟ ಹೊಗೆ ಸುತ್ತಮುತ್ತಲ ಗ್ರಾಮಗಳಿಗೂ ದಟ್ಟವಾಗಿ ಹಬ್ಬಿರುವ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಿಎಂ ಚಂದ್ರಬಾಬು ನಾಯ್ಡು ಗುರುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದು, ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಘಟನೆ ಬಗ್ಗೆ ಸಮಗ್ರ ತನಿಖೆಗೂ ಆದೇಶಿಸಿದ್ದಾರೆ. ಆರು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದ್ದು, ರಾಷ್ಟ್ರೀಯ ವಿಕೋಪ ಸ್ಪಂದನೆ ಪಡೆ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದೆ. ಆವರಣದಲ್ಲಿ ಸಿಕ್ಕಿಹಾಕಿಕೊಂಡ 13 ಮಂದಿಯನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.