ನಕಲಿ ಆಧಾರ್, ಪಾನ್ ಕಾರ್ಡ್ ಸೃಷ್ಟಿಸುತ್ತಿದ್ದ ಇಬ್ಬರ ಬಂಧನ; ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದ ಪೊಲೀಸರು
ಸೂರತ್ (ಗುಜರಾತ್): ಅಂತರ್ಜಾಲ ತಾಣವೊಂದನ್ನು ಬಳಸಿಕೊಂಡು ಆಧಾರ್, ಪಾನ್ ಕಾರ್ಡ್ ನಂತಹ ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆ ಒಡ್ಡುತ್ತಿದ್ದ ಇಬ್ಬರು ದುಷ್ಕರ್ಮಿಗಳನ್ನು ಸೂರತ್ ನಗರದಿಂದ ಬಂಧಿಸಲಾಗಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆರೋಪಿಗಳು ಸರ್ಕಾರಿ ದತ್ತಾಂಶಕ್ಕೆ ಪ್ರವೇಶ ಪಡೆಯುವ ಮೂಲಕ, ಕಾನೂನುಬಾಹಿರ ದೃಢೀಕರಣ ಮತ್ತು ಗಂಭೀರ ಬೆದರಿಕೆ ಒಡ್ಡುವಂಥ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಸೋಮವಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಸುಮಾರು 2 ಲಕ್ಷದಷ್ಟು ಆಧಾರ್ ಮತ್ತು ಪಾನ್ ಕಾರ್ಡ್ ನಂಥ ದಾಖಲೆಗಳನ್ನು ನಕಲು ಮಾಡಿ, ಅವುಗಳನ್ನು ರೂ. 150ರಿಂದ ರೂ. 200ರವರೆಗೆ ಮಾರಾಟ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಖಾಸಗಿ ಸಾಲ ನೀಡಿಕೆ ಸಂಸ್ಥೆಯೊಂದರ ಅಧಿಕಾರಿಗಳು ಕೆಲವು ವ್ಯಕ್ತಿಗಳು ನಕಲಿ ದಾಖಲೆಗಳನ್ನು ಒದಗಿಸುವ ಮೂಲಕ ಸಾಲ ಪಡೆದು, ನಂತರ ಮರುಪಾವತಿ ಮಾಡದೆ ವಂಚಿಸಿದ್ದಾರೆ ಎಂದು ನೀಡಿದ್ದ ದೂರನ್ನು ಆಧರಿಸಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ಫೋರ್ಜರಿ ಹಾಗೂ ವಂಚನೆ ಪ್ರಕರಣದಡಿ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಆರ್ಥಿಕ ಅಪರಾಧಗಳು) ವಿ.ಕೆ.ಪಾರ್ಮರ್ ಹೇಳಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ ಆರು ಮಂದಿ ಆರೋಪಿಗಳ ಪೈಕಿ, ಪ್ರಿನ್ಸ್ ಹೇಮಂತ್ ಪ್ರಸಾದ್ ಎಂದು ಗುರುತಿಸಲಾಗಿರುವ ಆರೋಪಿಯು, ನೋಂದಾಯಿತ ಬಳಕೆದಾರರ ಹೆಸರು ಹಾಗೂ ಪಾಸ್ ವರ್ಡ್ ಬಳಸಿಕೊಂಡು ಪ್ರಶ‍್ನೆಗೀಡಾಗಿರುವ ಅಂತರ್ಜಾಲ ತಾಣವನ್ನು ಪ್ರವೇಶಿಸುತ್ತಿದ್ದೆವು. ನಂತರ, ಪ್ರತಿ ದಾಖಲೆಗೆ ರೂ. 15-50 ಪಾವತಿ ಮಾಡಿ, ನಕಲಿ ಆಧಾರ್ ಮತ್ತು ಪಾನ್ ಕಾರ್ಡ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದೆವು ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಆ ಅಂತರ್ಜಾಲ ತಾಣದ ಮೂಲಕ ಡೌನ್ ಲೋಡ್ ಮಾಡಿಕೊಂಡ ನಕಲಿ ಗುರುತಿನ ಚೀಟಿಗಳನ್ನು ಬ್ಯಾಂಕ್ ಲೋನ್ ಮಂಜೂರು ಮಾಡಿಸಿಕೊಳ್ಳಲು ಹಾಗೂ ಸಿಮ್ ಕಾರ್ಡ್ ಗಳನ್ನು ಖರೀದಿಸಲು ಬಳಸಲಾಗುತ್ತಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.
ಅಂತರ್ಜಾಲ ತಾಣದಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊಬೈಲ್ ಸಂಖ್ಯೆಗಳ ಪೈಕಿ ಒಂದು ಮೊಬೈಲ್ ಸಂಖ್ಯೆಯ ಮೂಲಕ ತನ್ನ ಹೆಸರನ್ನು ಸೇರ್ಪಡೆ ಮಾಡಿಕೊಂಡಿರುವ ರಾಜಸ್ಥಾನದ ಗಂಗಾನಗರ ನಿವಾಸಿಯಾದ ಸೋಮನಾಥ್ ಪ್ರಮೋದ್ ಕುಮಾರ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅಂತರ್ಜಾಲ ತಾಣವನ್ನು ತನ್ನ ಹೆಸರಿನಲ್ಲಿ ಸೃಷ್ಟಿಸಿರುವ ಉತ್ತರ ಪ್ರದೇಶದ ಉನ್ನಾವ್ ನಿವಾಸಿ ಪ್ರೇಮ್ ವೀರ್ ಸಿನ್ಹ ಠಾಕೂರ್ ಎಂಬ ಮತ್ತೊಬ್ಬ ವ್ಯಕ್ತಿಯನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ವಿಚಾರಣೆಗೊಳಪಡಿಸಿದಾಗ, ಆರೋಪಿಗಳು ಕಳೆದ ಎರಡು ವರ್ಷಗಳಲ್ಲಿ ಸುಮಾರು 2 ಲಕ್ಷ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದೇವೆ ಎಂದು ಬಹಿರಂಗ ಪಡಿಸಿದ್ದಾರೆ. ಆರೋಪಿಗಳ ಪೈಕಿ ಸೋಮನಾಥ್ ಕೇವಲ 5ನೇ ತರಗತಿವರೆಗೆ ಮಾತ್ರ ವ್ಯಾಸಂಗ ಮಾಡಿದ್ದು, ಈ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಲು ಕೆಲವು ವ್ಯಕ್ತಿಗಳಿಂದ ತಾಂತ್ರಿಕ ನೆರವು ಪಡೆದಿದ್ದಾನೆ. ಈ ಅಂತರ್ಜಾಲ ತಾಣವು ಕಳೆದ ಮೂರು ವರ್ಷಗಳಿಂದ ಚಾಲ್ತಿಯಲ್ಲಿದೆ” ಎಂದೂ ಅವರು ಹೇಳಿದ್ದಾರೆ.
“ಇದು ಗಂಭೀರ ರಾಷ್ಟ್ರೀಯ ಭದ್ರತೆಯ ವಿಷಯವಾಗಿದೆ. ಅವರು ದಾಖಲೆಗಳನ್ನು ತಿದ್ದುಪಡಿ ಮಾಡದೆ ಇದ್ದರೂ, ಸರ್ಕಾರಿ ದತ್ತಾಂಶಗಳಿಗೆ ಪ್ರವೇಶ ಪಡೆದಿದ್ದು, ಇದು ಕಾನೂನು ಬಾಹಿರ ದೃಢೀಕರಣ ಪ್ರಕರಣವಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಜಾಲದ ಹಿಂದೆ ಮತ್ತಷ್ಟು ವ್ಯಕ್ತಿಗಳು ಇರುವ ಸಾಧ್ಯತೆ ಇದ್ದು, ಪ್ರಮೋದ್ ಕುಮಾರ್ ಹಾಗೂ ಆತನ ತಾಯಿಯ ಬ್ಯಾಂಕ್ ಖಾತೆಗಳಲ್ಲಿದ್ದ ರೂ. 25 ಲಕ್ಷ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ವಿ.ಕೆ.ಪಾರ್ಮರ್ ಹೇಳಿದ್ದಾರೆ.