ತೆಲಂಗಾಣ ಸಿಎಂ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಆರೋಪ : ಇಬ್ಬರು ಪತ್ರಕರ್ತೆಯರ ಬಂಧನ

Photo | X
ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿರುವ ಆರೋಪದಲ್ಲಿ ಇಬ್ಬರು ಮಹಿಳಾ ಪತ್ರಕರ್ತರನ್ನು ಹೈದರಾಬಾದ್ನ ಸೈಬರ್ ಪೊಲೀಸರು ಬಂಧಿಸಿದ್ದಾರೆ.
ಪಲ್ಸ್ ನ್ಯೂಸ್ನ(Pulse News) ವ್ಯವಸ್ಥಾಪಕ ನಿರ್ದೇಶಕಿ ಪೊಗಡದಂಡ ರೇವತಿ, ವರದಿಗಾರ್ತಿ ತನ್ವಿ ಯಾದವ್ ಮತ್ತು ʼನಿಪ್ಪುಕೋಡಿʼ ಎಂಬ ಎಕ್ಸ್ ಬಳಕೆದಾರರನ್ನು ಬಂಧಿಸಲಾಗಿದೆ.
ತೆಲಂಗಾಣ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಘಟಕದ ಮುಖ್ಯಸ್ಥರು ನೀಡಿರುವ ದೂರಿನ ಮೇರೆಗೆ ಸಂಘಟಿತ ಅಪರಾಧ, ದ್ವೇಷ ಪ್ರಚೋದಿಸಲು ವದಂತಿಗಳನ್ನು ಹರಡುವುದು ಮತ್ತು ಶಾಂತಿ ಭಂಗಕ್ಕೆ ಪ್ರಚೋದನೆ ಆರೋಪದಲ್ಲಿ ರೇವತಿ, ತನ್ವಿ ಯಾದವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಎಕ್ಸ್ ಖಾತೆಯಲ್ಲಿನ ವೀಡಿಯೊಗೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ವೀಡಿಯೊದಲ್ಲಿ ಪಲ್ಸ್ ನ್ಯೂಸ್ ವರದಿಗಾರ್ತಿ ವ್ಯಕ್ತಿಯೋರ್ವರನ್ನು ಸಂದರ್ಶನ ಮಾಡುವುದು, ಅವರು ಮುಖ್ಯಮಂತ್ರಿಯ ಬಗ್ಗೆ ಆಕ್ಷೇಪಾರ್ಹ ಮತ್ತು ನಿಂದನೀಯ ಟೀಕೆಗಳನ್ನು ಮಾಡುವುದು ಕಂಡು ಬಂದಿದೆ ಎಂದು ಹೇಳಲಾಗಿದೆ.
ಇಬ್ಬರು ಪತ್ರಕರ್ತರ ಬಂಧನ ತೆಲಂಗಾಣದಲ್ಲಿ ಆಡಳಿತ ಪಕ್ಷದ ವಿರುದ್ಧ ಪ್ರತಿಪಕ್ಷಗಳ ಟೀಕೆಗೆ ಕಾರಣವಾಗಿದೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಬಿಆರ್ಎಸ್ನ ಕೆಟಿ ರಾಮರಾವ್, ರೇವತಿಯನ್ನು ಕಾನೂನು ಬಾಹಿರವಾಗಿ ಬಂಧಿಸಲಾಯಿತು. ಪೊಲೀಸರು ಬೆಳಿಗ್ಗೆ 5 ಗಂಟೆಗೆ ಅವರ ಮನೆಗೆ ದಾಳಿ ನಡೆಸಿ ಬಂಧಿಸಿದರು. ಇದು ಕಾಂಗ್ರೆಸ್ನ ತುರ್ತು ಪರಿಸ್ಥಿತಿಯ ಶೈಲಿಯ ಆಳ್ವಿಕೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.