ರೈಲ್ವೆಯಲ್ಲಿ 2600 ಕೋಟಿ ರೂ. ಗೂ ಅಧಿಕ ನಷ್ಟ: ಸಿಎಜಿ ವರದಿ
ಟೆಕ್ನೋಕ್ರಾಟ್ ರೈಲ್ವೆ ಸಚಿವರು ಬಂದು ಮಾಡಿದ್ದೇನು ?
ಸಾಂದರ್ಭಿಕ ಚಿತ್ರ
ಇತ್ತೀಚೆಗೆ ಸಿಎಜಿಯ ಹೊಸ ವರದಿಯೊಂದು ಬಂದಿದೆ. ದೇಶದಲ್ಲಿ ರೈಲ್ವೇ ಅಪಘಾತಗಳು ಹೆಚ್ಚುತ್ತಿದ್ದು ಪ್ರತಿಪಕ್ಷಗಳು ರೈಲ್ವೆ ಸಚಿವಾಲಯದ ಕಾರ್ಯನಿರ್ವಹಣೆಯ ಬಗ್ಗೆ ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಿವೆ. ಇದೀಗ ಲೆಕ್ಕಪರಿಶೋಧನೆಯಲ್ಲಿ, ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಕೂಡ ರೈಲ್ವೆ ಸಚಿವಾಲಯಕ್ಕೆ ಕಠಿಣ ಪ್ರಶ್ನೆಗಳನ್ನು ಕೇಳಿದ್ದಾರೆ.
2600 ಕೋಟಿ ರೂಪಾಯಿಗೂ ಅಧಿಕ ಆರ್ಥಿಕ ನಷ್ಟದ ಬಗ್ಗೆ ಸಿಎಜಿ ರೈಲ್ವೆ ಸಚಿವಾಲಯಕ್ಕೆ ಪ್ರಶ್ನೆಗಳನ್ನು ಕೇಳಿದೆ.
ದೇಶದ ಸರ್ಕಾರದ ಇಲಾಖೆಗಳ ಲೆಕ್ಕಪರಿಶೋಧನೆ ಮಾಡುವ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ (ಸಿಎಜಿ), ರೈಲ್ವೆ ಸಚಿವಾಲಯವನ್ನು ತರಾಟೆಗೆ ತೆಗೆದುಕೊಂಡಿದೆ.
ದೇಶದಲ್ಲಿ ದಿನದಿಂದ ದಿನಕ್ಕೆ ಖರ್ಚುಗಳು ಹೆಚ್ಚಾಗುತ್ತಿದೆ. ಹೆದ್ದಾರಿಗಳಲ್ಲಿ ಟೋಲ್ ವಸೂಲಿಯೂ ಹೆಚ್ಚಾಗಿದೆ. ಹೀಗಿರುವಾಗ ದೇಶದ ದೊಡ್ಡ ಸಂಖ್ಯೆಯ ಜನರು ರೈಲ್ವೆ ಮೇಲೆ ಅವಲಂಬಿತರಾಗಿದ್ದಾರೆ. ಅಂದರೆ ದೇಶದ ದೊಡ್ಡ ಜನಸಂಖ್ಯೆಯ ಹಣದಿಂದಲೇ ರೈಲ್ವೆ ನಡೆಯುತ್ತಿದೆ. ಹೀಗಿರುವಾಗ ರೈಲ್ವೆ ಹಣದಲ್ಲಿ ಯಾವುದೇ ರೀತಿಯ ಅವ್ಯವಸ್ಥೆ ನೇರವಾಗಿ ಜನರ ಹಣದೊಂದಿಗೆ ನಡೆಯುತ್ತಿರುವ ಭ್ರಷ್ಟಾಚಾರ ಎಂದೇ ಹೇಳಿಕೊಳ್ಳಬೇಕಾಗುತ್ತದೆ.
2,604.40 ಕೋಟಿ ರೂಪಾಯಿ ಆರ್ಥಿಕ ನಷ್ಟಕ್ಕೆ ಸಂಬಂಧಿಸಿದಂತೆ ಸಚಿವಾಲಯಕ್ಕೆ ಸಿಎಜಿ ಕಠಿಣ ಪ್ರಶ್ನೆಗಳನ್ನು ಕೇಳಿದೆ. ಸಚಿವಾಲಯದ ಲೆಕ್ಕಪರಿಶೋಧನೆಯಲ್ಲಿ ಸಿಎಜಿ ಈ ಆರ್ಥಿಕ ನಷ್ಟವನ್ನು ಪತ್ತೆ ಮಾಡಿದೆ. ಜಿಎಸ್ಟಿ ವಸೂಲಿ ಮಾಡದ ಪ್ರಕರಣಗಳಿಂದ ರೈಲ್ವೆಗೆ ಈ ನಷ್ಟ ಉಂಟಾಗಿದೆ ಎಂದು ಸಿಎಜಿ ತನ್ನ ತನಿಖೆಯಲ್ಲಿ ಕಂಡುಕೊಂಡಿದೆ. ಇದಕ್ಕಾಗಿ ಒಟ್ಟು 33 ಪ್ರಕರಣಗಳನ್ನು ಸಿಎಜಿ ಅಧ್ಯಯನ ಮಾಡಿದೆ.
ಜಿಎಸ್ಟಿಯನ್ನು ಸರಿಯಾಗಿ ಸಂಗ್ರಹಿಸದಿರುವುದು ಮಾತ್ರವಲ್ಲದೆ, ಅನಗತ್ಯ ವೆಚ್ಚಕ್ಕೆ ಕಾರಣವಾದ ಅನೇಕ ಪ್ರಕರಣಗಳೂ ಇವೆ.
ರೈಲ್ವೆ ಸಚಿವಾಲಯವು ಪ್ರಯಾಣ ದರ ಮತ್ತು ಇತರ ಮೂಲಗಳಿಂದ ಆದಾಯವನ್ನು ಗಳಿಸುವ ವಿಷಯಗಳಲ್ಲಿ ತಪ್ಪಾದ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಹೇಳಿದೆ. ರೈಲ್ವೆಗೆ ಸಂಬಂಧಿಸಿದ ಕಾಮಗಾರಿಗಳಲ್ಲಿ ರಿಯಾಯಿತಿ ಮತ್ತು ಅನುದಾನವನ್ನು ತಪ್ಪಾಗಿ ನೀಡಲಾಗಿದೆ. ಇದರಿಂದ ಅನಗತ್ಯ ಖರ್ಚು ಬಂತು. ಹೀಗಾಗಿ ರೈಲ್ವೆ ಇಲಾಖೆ ನಷ್ಟ ಅನುಭವಿಸಿದೆ ಎಂದು ಸಿಎಜಿ ವರದಿ ಹೇಳಿದೆ.
33 ಪ್ರಕರಣಗಳಲ್ಲಿ ಕೇವಲ ಒಂದರಲ್ಲೇ ರೈಲ್ವೇ ಸಚಿವಾಲಯವು 834.72 ಕೋಟಿ ರೂ.ಗಳ ಬಡ್ಡಿಯ ನಷ್ಟ ಅನುಭವಿಸಿದೆ ಎಂದು ಸಿಎಜಿ ವರದಿ ಹೇಳುತ್ತದೆ.
ರೈಲ್ವೇ ತನ್ನ ನಿಯಂತ್ರಣದಲ್ಲಿರುವ ಭೂಮಿಯನ್ನು IRCON ಅಂದ್ರೆ Indian Railway Construction International Limited ಗೆ ಅಭಿವೃದ್ಧಿಗಾಗಿ ನೀಡಿದೆ. ಇದಕ್ಕಾಗಿ 3,200 ಕೋಟಿ ರೂಪಾಯಿ ಸಾಲ ತೆಗೆದುಕೊಳ್ಳಲಾಗಿದೆ.
IRCON ಸಾಲವನ್ನು ಬಡ್ಡಿಯೊಂದಿಗೆ ಮರುಪಾವತಿಸಿದೆ, ಆದರೆ ಆ ಭೂಮಿಯಲ್ಲಿ ಯಾವುದೇ ಅಭಿವೃದ್ಧಿ ಮಾಡಲಾಗಿಲ್ಲ ಎಂದು ವರದಿ ಹೇಳಿದೆ. ಮತ್ತೊಂದು ಪ್ರಕರಣದಲ್ಲಿ, ಎಂಜಿನ್ನ ಶಂಟಿಂಗ್ ಪ್ರಕ್ರಿಯೆಗೆ ರೈಲ್ವೆ ಯಾವುದೇ ಶುಲ್ಕವನ್ನು ವಿಧಿಸಿಲ್ಲ ಎಂದು ಸಿಎಜಿ ಕಂಡುಹಿಡಿದಿದೆ.
ಈ ಕಾರಣದಿಂದಾಗಿ, ಈಸ್ಟ್ ಕೋಸ್ಟ್ ರೈಲ್ವೇ 2018 ರಿಂದ 2022 ರವರೆಗೆ 149.12 ಕೋಟಿ ರೂಪಾಯಿಗಳ ಆದಾಯ ನಷ್ಟವನ್ನು ಅನುಭವಿಸಿದೆ. ರೈಲ್ವೆಯು ಸೈಡಿಂಗ್ ಮಾಲೀಕರಿಗೆ ಒದಗಿಸುವ ಸೇವೆಗಳ ಮೇಲೆ ಜಿಎಸ್ಟಿ ವಿಧಿಸುವ ನಿಯಮಗಳು ಮತ್ತು ನಿಬಂಧನೆಗಳನ್ನು ಸರಿಯಾಗಿ ಅನುಸರಿಸದ ಪ್ರಕರಣವೂ ಈ ವರದಿಯಲ್ಲಿ ಬೆಳಕಿಗೆ ಬಂದಿದೆ.
ಇದರಿಂದಾಗಿ ಸೈಡಿಂಗ್ ಮಾಲೀಕರಿಂದ 13.43 ಕೋಟಿ ರೂ. ಜಿಎಸ್ ಟಿ ಸಂಗ್ರಹವಾಗಿಲ್ಲ ಎಂದು ವರದಿ ತಿಳಿಸಿದೆ. ಬೊಕ್ಕಸಕ್ಕೆ ನಷ್ಟವಾಗುವುದನ್ನು ತಪ್ಪಿಸಲು ಮತ್ತು ಜಿಎಸ್ಟಿ ಅಧಿಸೂಚನೆಯ ನಿಬಂಧನೆಗಳನ್ನು ಅನುಷ್ಠಾನಗೊಳಿಸದಿದ್ದಕ್ಕಾಗಿ ಸೂಕ್ತ ಮಟ್ಟದಲ್ಲಿ ಜವಾಬ್ದಾರಿಯನ್ನು ನಿಗದಿಪಡಿಸಲು ವರದಿ ಹೇಳಿದೆ.
ಅಲ್ಲದೆ ಸೈಡಿಂಗ್ ಮಾಲೀಕರಿಂದ ಬಾಕಿ ಇರುವ ಜಿಎಸ್ಟಿಯನ್ನು ತಕ್ಷಣವೇ ವಸೂಲಿ ಮಾಡುವಂತೆ ಸಿಎಜಿ ರೈಲ್ವೆಗೆ ಕೇಳಿದೆ. ಭಾರತೀಯ ರೈಲ್ವೇಯಲ್ಲಿನ ಆರೋಗ್ಯ ಸೇವೆಗಳ ನಿರ್ವಹಣೆಯನ್ನು ಸಹ ಸಿಎಜಿ ಆಡಿಟ್ ಮಾಡಿದೆ.
ವಲಯ ರೈಲ್ವೆಯ ಆಸ್ಪತ್ರೆಗಳಲ್ಲಿ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿ ಕೊರತೆಯಿದೆ ಎಂದು ವರದಿ ಹೇಳಿದೆ. ಭಾರತೀಯ ಸಾರ್ವಜನಿಕ ಆರೋಗ್ಯ ಗುಣಮಟ್ಟ ಮಾನದಂಡಗಳ ಪ್ರಕಾರ ಯಂತ್ರಗಳ ಮತ್ತು ವೈದ್ಯಕೀಯ ಉಪಕರಣಗಳ ಲಭ್ಯತೆಯ ಕೊರತೆಯಿದೆ ಎಂದು ವರದಿ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ರೈಲ್ವೆಗೆ ಅಶ್ವಿನಿ ವೈಷ್ಣವ್ ಅವರನ್ನು ಸಚಿವರಾಗಿ ಮಾಡಿದಾಗ ಅದಕ್ಕೆ ಅಬ್ಬರದ ಪ್ರಚಾರ ನೀಡಲಾಯಿತು. ಅವರೊಬ್ಬ ಮೇಧಾವಿ, ಟೆಕ್ನೋಕ್ರಾಟ್ ಇತ್ಯಾದಿ ಎಂದೆಲ್ಲ ಬಣ್ಣಿಸಲಾಯಿತು. ಆದರೆ ಅವರ ಅಧೀನದಲ್ಲೇ ರೈಲ್ವೆಯ ಅವಸ್ಥೆ ಹೀಗಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.