ಉತ್ತರಪ್ರದೇಶ | ಸಂಭಾಲ್ ನ ಜಾಮಾ ಮಸೀದಿ ಆವರಣದಲ್ಲಿ ಸಮೀಕ್ಷೆ ವೇಳೆ ಘರ್ಷಣೆ: ಮೂವರು ಮೃತ್ಯು
Photo | PTI
ಲಕ್ನೋ: ಉತ್ತರಪ್ರದೇಶದ ಮಸೀದಿ ಸಮೀಕ್ಷೆಯನ್ನು ವಿರೋಧಿಸುತ್ತಿದ್ದ ಗುಂಪೊಂದು ಪೊಲೀಸರೊಂದಿಗೆ ನಡೆಸಿದ ಘರ್ಷಣೆಯಲ್ಲಿ ಮೂರು ಮಂದಿ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಸಂಭಾಲ್ ನಲ್ಲಿ ರವಿವಾರ ನಡೆದಿದೆ. ಮೊಘಲರು ದೇವಾಲಯವೊಂದನ್ನು ಧ್ವಂಸಗೊಳಿಸಿ ಮಸೀದಿ ನಿರ್ಮಾಣ ಮಾಡಿದ್ದಾರೆ ಎಂಬ ದೂರೊಂದನ್ನು ಆಧರಿಸಿ, ನ್ಯಾಯಾಲಯ ನೀಡಿದ್ದ ಆದೇಶದನ್ವಯ ಈ ಸಮೀಕ್ಷೆಗೆ ಚಾಲನೆ ನೀಡಲಾಗಿತ್ತು.
ನೂರಾರು ಸಂಖ್ಯೆಯಲ್ಲಿ ಶಾಹಿ ಜಾಮಾ ಮಸೀದಿ ಎದುರು ನೆರೆದಿದ್ದ ಪ್ರತಿಭಟನಾಕಾರರು, ಸಮೀಕ್ಷೆಯ ತಂಡವು ಮಸೀದಿಯ ಬಳಿ ಬರುತ್ತಿದ್ದಂತೆಯೆ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿದರು. ಭಾರಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಸ್ಥಳಕ್ಕೆ ಆಗಮಿಸಿದ್ದ ಸಮೀಕ್ಷೆ ತಂಡದ ಮೇಲೆ ಪ್ರತಿಭಟನಾಕಾರರ ಗುಂಪು ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಅದಕ್ಕೆ ಪ್ರತಿಯಾಗಿ ಉದ್ರಿಕ್ತ ಜನರ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ಅನ್ನು ಪ್ರಯೋಗಿಸಿದರು.
ಈ ಘರ್ಷಣೆಯಲ್ಲಿ ಮೃತಪಟ್ಟವರನ್ನು ನೌಮಾನ್, ಬಿಲಾಲ್ ಹಾಗೂ ನಯೀಂ ಎಂದು ಗುರುತಿಸಲಾಗಿದೆ ಎಂದು ಮೊರಾದಾಬಾದ್ ಉಪ ವಿಭಾಗೀಯ ಆಯುಕ್ತ ಆಂಜನೇಯ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಆದರೆ, ಪೊಲೀಸರು ಸಾವುಗಳನ್ನು ದೃಢಪಡಿಸಿದ್ದರೂ, ಮೃತಪಟ್ಟವರ ಹೆಸರುಗಳನ್ನು ಬಹಿರಂಗಪಡಿಸಿಲ್ಲ. ಮೃತರು ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ, ಮರಣೋತ್ತರ ಪರೀಕ್ಷೆಯ ನಂತರವಷ್ಟೆ ಸಾವಿನ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ.
“ಇಬ್ಬರು ಮಹಿಳೆಯರು ಸೇರಿದಂತೆ ಕೆಲವರನ್ನು ಬಂಧಿಸಲಾಗಿದೆ. ಮಹಿಳೆಯರು ತಾರಸಿಯ ಮೇಲಿಂದ ಕಲ್ಲು ತೂರುತ್ತಿದ್ದರು. ಇದುವರೆಗೆ ಸಂಭಾಲ್ ನಲ್ಲಿ ಮೂವರು ಮೃತಪಟ್ಟಿದ್ದಾರೆ” ಎಂದು ಉಪ ವಿಭಾಗೀಯ ಆಯುಕ್ತ ಆಂಜನೇಯ ಕುಮಾರ್ ಸಿಂಗ್ ತಿಳಿಸಿದ್ದಾರೆ.
“ಸಮೀಕ್ಷೆ ಮುಕ್ತಾಯಗೊಂಡ ನಂತರ, ಮೂರು ಗುಂಪುಗಳಿಂದ ಮೂರು ದಿಕ್ಕಿನಿಂದ ಕಲ್ಲು ತೂರಾಟ ಪ್ರಾರಂಭಗೊಂಡಿತು. ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಅಶ್ರುವಾಯು ಶೆಲ್ ಹಾಗೂ ಪ್ಲಾಸ್ಟಿಕ್ ಗುಂಡುಗಳನ್ನು ಬಳಸಿದರು. ಮತ್ತೊಂದು ಗುಂಪು ವಾಹನಗಳಿಗೆ ಬೆಂಕಿ ಹಚ್ಚಲು ಪ್ರಾರಂಭಿಸಿತು ಹಾಗೂ ಗುಂಡನ್ನೂ ಹಾರಿಸತೊಡಗಿತು. ಈ ದಾಳಿಯಲ್ಲಿ ಪೊಲೀಸರ ಪಾದಗಳಿಗೆ ಗುಂಡು ತಗುಲಿವೆ. ಉಪ ವಿಭಾಗಾಧಿಕಾರಿಗೆ ಮೂಳೆ ಮುರಿತವಾಗಿದೆ. ವೃತ್ತಾಧಿಕಾರಿ ಹಾಗೂ ಸುಮಾರು 15 ಪೊಲೀಸ್ ಪೇದೆಗಳು ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ನಾವು ಜನ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
ರವಿವಾರ ಬೆಳಗ್ಗೆ ಸ್ಥಳದಲ್ಲಿ ಉದ್ವಿಗ್ನತೆ ಪ್ರಾರಂಭವಾಯಿತು. ಮಸೀದಿಯ ಮುಂದೆ ನೆರೆದಿದ್ದ ಜನರ ಗುಂಪಿಗೆ ಅಲ್ಲಿಂದ ಚದುರುವಂತೆ ಜಾಮಾ ಮಸೀದಿ ಮುಖ್ಯಸ್ಥರು ಮಸೀದಿಯ ಒಳಗಿನಿಂದ ಪ್ರಕಟಣೆಯ ಮೂಲಕ ಮನವಿ ಮಾಡಿದರೂ, ಗುಂಪು ಅವರ ಮನವಿಯನ್ನು ಕೇಳಲಿಲ್ಲ. ಪರಿಸ್ಥಿತಿಯನ್ನು ತಿಳಿಗೊಳಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಯತ್ನಿಸಿದರೂ, ಜನರ ಗುಂಪು ಅದಕ್ಕೆ ಸ್ಪಂದಿಸಲಿಲ್ಲ ಹಾಗೂ ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿತು ಎಂದು ಆರೋಪಿಸಲಾಗಿದೆ.