ಕನ್ವರ್ ಮಾರ್ಗ ಯೋಜನೆಗೆ 33,000ಕ್ಕೂ ಅಧಿಕ ಮರಗಳನ್ನು ಕಡಿಯಲಾಗುವುದು: ಎನ್ಜಿಟಿಗೆ ಉತ್ತರ ಪ್ರದೇಶ ಸರ್ಕಾರ ಮಾಹಿತಿ
ಭಕ್ತರಿಗೆ ಅನುಕೂಲಕರವಾಗಲು 111 ಕಿಮೀ ಉದ್ದದ ಕನ್ವರ್ ರಸ್ತೆ ನಿರ್ಮಿಸಲು ಉದ್ದೇಶಿಸಿರುವ ಆದಿತ್ಯನಾಥ್ ಸರಕಾರ ► ಹೆಚ್ಚಿನ ವಿವರ ಕೋರಿದ ಟ್ರಿಬ್ಯುನಲ್
ಸಾಂದರ್ಭಿಕ ಚಿತ್ರ (PTI)
ಗಾಝಿಯಾಬಾದ್: ಗಾಝಿಯಾಬಾದ್, ಮೀರತ್, ಮುಝಫ್ಫರನಗರ ಮೂಲಕ ಹಾದು ಹೋಗುವ 111 ಕಿಮೀ ಉದ್ದದ ಕನ್ವರ್ ಮಾರ್ಗ ಯೋಜನೆಗೆ 33,000 ಕ್ಕೂ ಅಧಿಕ ಮರಗಳನ್ನು ಕಡಿಯಬೇಕಾಗಬಹುದು ಎಂದು ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ಗೆ ಉತ್ತರ ಪ್ರದೇಶ ಸರ್ಕಾರ ಮಾಹಿತಿ ನೀಡಿದೆ Times of India ವರದಿ ಮಾಡಿದೆ.
ಮುಂದಿನ ವಿಚಾರಣೆ ನಡೆಯುವ ಜುಲೈ 8ಕ್ಕಿಂತ ಮುಂಚೆ ಇನ್ನಷ್ಟು ವಿವರಗಳನ್ನು ಸರ್ಕಾರದಿಂದ ಟ್ರಿಬ್ಯುನಲ್ ಅಧ್ಯಕ್ಷ ಪ್ರಕಾಶ್ ಶೀವಾಸ್ತವ, ಅರುಣ್ ಕುಮಾರ್ ತ್ಯಾಗಿ ಮತ್ತು ತಜ್ಞ ಸದಸ್ಯ ಎ ಸೆಂಥಿಲ್ ವೇಲ್ ಅವರ ಪೀಠ ಕೋರಿದೆ.
ಮೂರು ಜಿಲ್ಲೆಗಳ ಮೂಲಕ ಹಾದು ಹೋಗುವ ಈ ಯೋಜನೆಗೆ 1.1 ಲಕ್ಷ ಮರಗಳು ಮತ್ತು ಗಿಡಗಳನ್ನು ಕಡಿಯಲು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆ ಅನುಮತಿ ನೀಡಿತ್ತು.
ಈ ವಿಚಾರವನ್ನು ಸ್ವಯಂಪ್ರೇರಣೆಯಿಂದ ಕೈಗೆತ್ತಿಕೊಂಡ ಟ್ರಿಬ್ಯುನಲ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಸಚಿವಾಲಯ ಮತ್ತು ಲೋಕೋಪಯೋಗಿ ಇಲಾಖೆ ಹಾಗೂ ಮೂರೂ ಜಿಲ್ಲೆಗಳ ಮ್ಯಾಜಿಸ್ಟ್ರೇಟರಿಂದ ಮಾಹಿತಿ ಕೇಳಿತ್ತು. ಸರ್ಕಾರ ಮಾಹಿತಿ ನೀಡಿದರೂ ಇನ್ನಷ್ಟು ವಿವರಗಳನ್ನು ಟ್ರಿಬ್ಯುನಲ್ ಕೇಳಿದೆ.
ಹರಿದ್ವಾರದಿಂದ ಗಂಗಾಜಲದೊಂದಿಗೆ ಉತ್ತರ ಪ್ರದೇಶ, ಹರ್ಯಾಣ, ರಾಜಸ್ಥಾನ, ದಿಲ್ಲಿ ಮತ್ತು ಮಧ್ಯ ಪ್ರದೇಶದ ವಿವಿಧ ಪಟ್ಟಣ ಮತ್ತು ಗ್ರಾಮಗಳಿಗೆ ಮರಳುವ ಸುಮಾರು ಒಂದು ಕೋಟಿ ಭಕ್ತರಿಗೆ ಅನುಕೂಲಕರವಾಗಲು ಕನ್ವರ್ ರಸ್ತೆ ನಿರ್ಮಿಸಲು ಉದ್ದೇಶಿಸಿರುವುದಾಗಿ ಸರ್ಕಾರವು ಟ್ರಿಬ್ಯುನಲ್ಗೆ ಹೇಳಿದೆ.
ಈ ರಸ್ತೆಯು ಮುಝಫ್ಫರನಗರ, ಮೀರತ್ ಮತ್ತು ಗಾಜಿಯಾಬಾದ್ ನ 54 ಗ್ರಾಮಗಳ ಮೂಲಕ ಹಾದುಹೋಗುತ್ತದೆ.
ಗಂಗಾ ಮೇಲ್ದಂಡೆ ಕಾಲುವೆಯುದ್ದಕ್ಕೂ ಹರಡಿರುವ ಪಶ್ಚಿಮ ಉತ್ತರ ಪ್ರದೇಶದ ಮತ್ತು ಉತ್ತರಾಖಂಡ ಜಿಲ್ಲೆಗಳ ಮೂಲಕ ಹಾದು ಹೋಗುವ ಸಾಮಾನ್ಯ ಮಾರ್ಗಕ್ಕೆ ಪರ್ಯಾಯವಾಗಿ 2018ರಲ್ಲಿ ಸರ್ಕಾರ ಕನ್ವರ್ ಮಾರ್ಗ ಪ್ರಸ್ತಾಪಿಸಿತ್ತು. 2020ರಲ್ಲಿ ಸರ್ಕಾರದ ಖರ್ಚುವೆಚ್ಚಗಳ ಮತ್ತು ಹಣಕಾಸು ಸಮಿತಿ ಈ ಯೋಜನೆಗೆ ಅನುಮೋದನೆ ನೀಡಿತ್ತು. ಈ ರಸ್ತೆಯ ಭಾಗವಾಗಿ 10 ಪ್ರಮುಖ ಸೇತುವೆಗಳು, 27 ಸಣ್ಣ ಸೇತುವೆಗಳು ಮತ್ತು ಒಂದು ರೈಲ್ವೆ ಮೇಲ್ಸೇತುವೆ ಪ್ರಸ್ತಾಪಿಸಲಾಗಿದೆ.