ಕ್ಯಾಂಪಸ್ ಸೆಲೆಕ್ಷನ್ನಲ್ಲಿ ಐಐಟಿ ಬಾಂಬೆ ವಿದ್ಯಾರ್ಥಿಗೆ 3.7 ಕೋ. ರೂ ಸಂಬಳ!
ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೆಚ್ಚಿದ ಬೇಡಿಕೆ
Photo: NDTV
ಮುಂಬೈ: ಕ್ಯಾಂಪಸ್ ಸೆಲೆಕ್ಷನ್ನಲ್ಲಿ ಐಐಟಿ ಬಾಂಬೆಯ ವಿದ್ಯಾರ್ಥಿಯೊಬ್ಬ 3.7 ಕೋಟಿ ರೂ. ವಾರ್ಷಿಕ ವರಮಾನದ ಸಾಗರೋತ್ತರ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದಾರೆ. ದೇಶಿಯವಾಗಿ 1.7 ಕೋಟಿ ರೂ. ವಾರ್ಷಿಕ ವರಮಾನದ ಉದ್ಯೋಗವನ್ನು ಮತ್ತೋರ್ವ ವಿದ್ಯಾರ್ಥಿ ಪಡೆದುಕೊಂಡಿದ್ದಾರೆ ಎಂದು NDTV ವರದಿ ಮಾಡಿದೆ.
ಕಳೆದ ವರ್ಷ ನಡೆದ ಕ್ಯಾಂಪಸ್ ಸೆಲೆಕ್ಷನ್ನಲ್ಲಿ 2.1 ಕೋಟಿ ರೂ. ವರಮಾನದ ಸಾಗರೋತ್ತರ ಉದ್ಯೋಗವನ್ನು ಇಲ್ಲಿನ ವಿದ್ಯಾರ್ಥಿಯೊಬ್ಬರು ಪಡೆದುಕೊಂಡಿದ್ದರು
ಐಐಟಿ ಬಾಂಬೆಯ 16 ವಿದ್ಯಾರ್ಥಿಗಳು ಈ ಬಾರಿ 1 ಕೋಟಿ ರೂ. ಗಳಿಗೂ ಅಧಿಕ ವಾರ್ಷಿಕ ವರಮಾನವಿರುವ ಉದ್ಯೋಗ ಪಡೆದುಕೊಂಡಿದ್ದು, 300 ಪ್ರಿ ಪ್ಲೇಸ್ಮೆಂಟ್ ಆಫರ್ಗಳಲ್ಲಿ 194 ಮಂದಿ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಯುನೈಟೆಡ್ ಸ್ಟೇಟ್ಸ್, ಜಪಾನ್, ನೆದರ್ ಲ್ಯಾಂಡ್, ಹಾಂಗ್ ಕಾಂಗ್, ತೈವಾನ್, ಯುನೈಟೆಡ್ ಕಿಂಗ್ಡಂಗಳಲ್ಲಿ ಐಐಟಿ ಬಾಂಬೆಯ 65 ವಿದ್ಯಾರ್ಥಿಗಳು ಈ ಬಾರಿ ಉದ್ಯೋಗ ಪಡೆದುಕೊಂಡಿದ್ದಾರೆ. 2022-23 ರಲ್ಲಿ ಉದ್ಯೋಗ ಸರಾಸರಿ ವಾರ್ಷಿಕ ಸಂಬಳ ರೂ. 21.82 ಲಕ್ಷ ಇದೆ ಎಂದು ಸಂಸ್ಥೆ ಹೇಳಿದೆ.
ಅದರಲ್ಲಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ವಿದ್ಯಾರ್ಥಿಗಳೇ ಅತೀ ಹೆಚ್ಚು ಉದ್ಯೋಗ ಪಡೆದಿದ್ದಾರೆ ಎಂದು ವರದಿಯಾಗಿದೆ. 97 ಪ್ರಮುಖ ಇಂಜಿನಿಯರಿಂಗ್ ಸಂಸ್ಥೆಗಳಿಗೆ 458 ಮಂದಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಲಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಮಾಹಿತಿ ತಂತ್ರಜ್ಞಾನ ಮತ್ತು ಸಾಫ್ಟ್ವೇರ್ ಕ್ಷೇತ್ರಗಳಲ್ಲಿ ಕಡಿಮೆ ವಿದ್ಯಾರ್ಥಿಗಳು ನೇಮಕಗೊಂಡಿದ್ದಾರೆ. ಸಕ್ರಿಯವಾಗಿ ಪಾಲ್ಗೊಂಡ ವಿದ್ಯಾರ್ಥಿಗಳಲ್ಲಿ 82 ಶೇಕಡಾ ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.