ಉತ್ತರ ಪ್ರದೇಶ: ಅಡ್ಡ ಗೋಡೆಯಿಲ್ಲದೆ ನಾಲ್ಕು ಶೌಚಾಲಯ ನಿರ್ಮಾಣ !
ಟ್ರೋಲ್ಗೆ ಗುರಿಯಾದ ಸ್ಮೃತಿ ಇರಾನಿ ಕ್ಷೇತ್ರದ ಅಸಮರ್ಪಕ ಕಾಮಗಾರಿ
Screengrab: Twitter/@INCUttarPradesh
ಅಮೇಥಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಲೋಕಸಭಾ ಕ್ಷೇತ್ರವಾದ ಅಮೇಥಿಯಲ್ಲಿ ಯಾವುದೇ ಅಡ್ಡ ಗೋಡೆ ನಿರ್ಮಿಸದೆ ಒಂದರ ಪಕ್ಕ ಒಂದರ ಹಾಗೆ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯದ ವಿಡಿಯೋ ವೈರಲ್ ಆಗಿದೆ.
ಈ ಘಟನೆಯು ಅಮೇಥಿಯ ಜಗದೀಶ್ಪುರ್ ಬ್ಲಾಕ್ ನ ಕಟೇಹ್ಟಿ ಗ್ರಾಮದಿಂದ ವರದಿಯಾಗಿದ್ದು, ಇಲ್ಲಿನ ಸಾರ್ವಜನಿಕ ಶೌಚಾಲಯವನ್ನು ಭಾರೀ ಮೊತ್ತ ವ್ಯಯಿಸಿ ನಿರ್ಮಿಸಲಾಗಿದೆ. ಈ ಸಾರ್ವಜನಿಕ ಶೌಚಾಲಯವನ್ನು ಗ್ರಾಮಸ್ಥರ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದರೂ, ಈ ಶೌಚಾಲಯಕ್ಕೆ ಬೀಗ ಜಡಿಯಲಾಗಿದೆ. ಶೌಚಾಲಯದಲ್ಲಿನ ಎಲ್ಲ ಐದು ಶೌಚಾಸನಗಳಲ್ಲಿ ಧೂಳು ಮೆತ್ತಿಕೊಂಡಿದೆ.
ಈ ವಿಡಿಯೊವನ್ನು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಉತ್ತರ ಪ್ರದೇಶ ಕಾಂಗ್ರೆಸ್ ಘಟಕವು, ಈ ವಿಚಿತ್ರ ಸಾರ್ವಜನಿಕ ಶೌಚಾಲಯವನ್ನು ಯಾಕೆ ವಿಶ್ವದ 8ನೇ ಅದ್ಭುತವೆಂದು ಘೋಷಿಸಬಾರದು ಎಂದು ಅಮೇಥಿ ಸಂಸದೆ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿಯನ್ನು ಗುರಿಯಾಗಿಸಿಕೊಂಡು ವ್ಯಂಗ್ಯವಾಡಿದೆ. ಈ ಘಟನೆಗೆ ಉತ್ತರದಾಯಿತ್ವವನ್ನು ಆಗ್ರಹಿಸಿರುವ ಕಾಂಗ್ರೆಸ್, ಈ ಲೋಪಕ್ಕೆ ಗುತ್ತಿಗೆದಾರ, ಅಧಿಕಾರಿಗಳು ಅಥವಾ ಕೇಂದ್ರ ಸಚಿವರೇ ಕಾರಣವೇ ಎಂದು ಪ್ರಶ್ನೆಯೆತ್ತಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಕಾಂತ್ ಯಾದವ್, ಈ ಸಾರ್ವಜನಿಕ ಶೌಚಾಲಯವು ಹಳತಾಗಿದ್ದು, ಹೊಸ ಸಾರ್ವಜನಿಕ ಶೌಚಾಲಯವನ್ನು ಗ್ರಾಮದ ಬೇರೆ ಕಡೆ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.
ಹಳತಾದ ಸಾರ್ವಜನಿಕ ಶೌಚಾಲಯದಿಂದ ಶೌಚಾಸನಗಳನ್ನು ತೆಗೆದು ಹಾಕುವಂತೆ ಆದೇಶಿಸಲಾಗಿದ್ದರೂ, ಯೋಜನೆಯಂತೆ ಈ ಆದೇಶ ಕಾರ್ಯಗತವಾಗಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.