ದಿಲ್ಲಿಯಲ್ಲಿ 4.0 ತೀವ್ರತೆಯ ಭೂಕಂಪನ; ಉತ್ತರ ಭಾರತದಾದ್ಯಂತ ಕಂಪನದ ಅನುಭವ

ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸೋಮವಾರ ಬೆಳಿಗ್ಗೆ 5:36 ಕ್ಕೆ 4.0 ತೀವ್ರತೆಯ ಭೂಕಂಪನ ಸಂಭವಿಸಿದೆ. ದಿಲ್ಲಿ ಮತ್ತು ಅದರ ಅಕ್ಕಪಕ್ಕದ ಪ್ರದೇಶಗಳಲ್ಲಿ ಬಲವಾದ ಕಂಪನದ ಅನುಭವವಾಗಿರುವ ಬಗ್ಗೆ ವರದಿಯಾಗಿದೆ.
ದಿಢೀರನೇ ಭೂಮಿ ಕಂಪಿಸಲು ಆರಂಭಿಸಿದ್ದರಿಂದ ನಾಗರಿಕರು ಭಯಭೀತಿಯಿಂದ ಮನೆಗಳಿಂದ ಹೊರಕ್ಕೆ ಓಡಿಬಂದರು ಎಂದು ತಿಳಿದು ಬಂದಿದೆ.
ದಿಲ್ಲಿಯನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಸಂಭವಿಸಿದ ಭೂಕಂಪದ ಆಳ ಕೇವಲ 5 ಕಿ.ಮೀ. ಆಗಿತ್ತು. ಉತ್ತರ ಭಾರತದಾದ್ಯಂತ ಕಂಪನದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ತಿಳಿಸಿದೆ.
ರಾಷ್ಟ್ರ ರಾಜಧಾನಿ ಪ್ರದೇಶ ಮತ್ತು ಅಕ್ಕಪಕ್ಕದ ರಾಜ್ಯಗಳಲ್ಲಿ ಭೂಕಂಪನದ ಅನುಭವವಾಗಿದ್ದು, ತಕ್ಷಣಕ್ಕೆ ಯಾವುದೇ ಹಾನಿ ಅಥವಾ ಸಾವು ನೋವಿನ ವರದಿಗಳು ಬಂದಿಲ್ಲ.
ಕಳೆದ ತಿಂಗಳು, ಜನವರಿ 23 ರಂದು, ಚೀನಾದ ಕ್ಸಿನ್‌ಜಿಯಾಂಗ್‌ನಲ್ಲಿ 80 ಕಿಲೋಮೀಟರ್ ಆಳದಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ದಿಲ್ಲಿ-ಎನ್‌ಸಿಆರ್ ನಾದ್ಯಂತ ಬಲವಾದ ಕಂಪನದ ಅನುಭವವಾಗಿತ್ತು. ಅದಕ್ಕೂ ಎರಡು ವಾರಗಳ ಮೊದಲು, ಜನವರಿ 11 ರಂದು ಅಫ್ಘಾನಿಸ್ತಾನದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ದೆಹಲಿ ಮತ್ತು ಎನ್‌ಸಿಆರ್ ನಲ್ಲಿ ಲಘು ಕಂಪನಗಳ ಅನುಭವವಾಗಿತ್ತು.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28