ಉತ್ತರಾಖಂಡ ಹಿಮಪಾತ | 47 ಕಾರ್ಮಿಕರ ರಕ್ಷಣೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ

Photo | indiatoday
ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾನಾ ಗ್ರಾಮದ ಬಳಿ ಹಿಮಪಾತ ಸಂಭವಿಸಿ ಅವಶೇಷಗಳಡಿ ಸಿಲುಕಿದ 55 ಕಾರ್ಮಿಕರಲ್ಲಿ 47 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಇನ್ನುಳಿದ 8 ಮಂದಿಯ ರಕ್ಷಣೆಗೆ ಭಾರತೀಯ ಸೇನೆ ಸೇರಿದಂತೆ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿದೆ.
ರಕ್ಷಣಾ ಕಾರ್ಯಾಚರಣೆಯ ಎರಡನೇ ದಿನವಾದ ಶನಿವಾರ ಭಾರತೀಯ ಸೇನೆಯು 14 ಕಾರ್ಮಿಕರನ್ನು ರಕ್ಷಿಸಿದೆ. ಅವರಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೆಲಿಕಾಪ್ಟರ್ಗಳ ಮೂಲಕ ರವಾನಿಸಲಾಗಿದೆ.
ಶುಕ್ರವಾರ ರಕ್ಷಣಾ ತಂಡ 33 ಕಾರ್ಮಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿವೆ. ರಾತ್ರಿಯಾಗುತ್ತಿದ್ದಂತೆ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಭಾರೀ ಹಿಮಪಾತ ಮತ್ತು ಹೆಚ್ಚಿನ ಹಿಮಪಾತದ ಭೀತಿಯ ನಡುವೆ ಇನ್ನುಳಿದ ಕಾರ್ಮಿಕರನ್ನು ಪತ್ತೆ ಮಾಡುವುದು ಸವಾಲಿನ ಸಂಗತಿಯಾಗಿದೆ.
ಕೇಂದ್ರ ರಕ್ಷಣಾ ಸಚಿವಾಲಯದ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬರ್ತ್ವಾಲ್ ಈ ಕುರಿತು ಪ್ರತಿಕ್ರಿಯಿಸಿ, ಇನ್ನುಳಿದ ಕಾರ್ಮಿಕರನ್ನು ಪತ್ತೆಹಚ್ಚಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿವೆ ಎಂದು ಹೇಳಿದ್ದಾರೆ. ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಹಿಮಪಾತದಲ್ಲಿ ಸಿಲುಕಿದ ಕಾರ್ಮಿಕರು ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಜಮ್ಮು,ಕಾಶ್ಮೀರಕ್ಕೆ ಸೇರಿದವರಾಗಿದ್ದಾರೆ.