ಇರಾನ್: ಐವರು ಭಾರತೀಯ ನಾವಿಕರ ಬಿಡುಗಡೆ
ಸಾಂದರ್ಭಿಕ ಚಿತ್ರ (PTI)
ಟೆಹ್ರಾನ್: ಇರಾನ್ ವಶಪಡಿಸಿಕೊಂಡಿದ್ದ ಇಸ್ರೇಲ್ ನೊಂದಿಗೆ ಸಂಪರ್ಕ ಹೊಂದಿದ್ದ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಐವರು ಭಾರತೀಯ ನಾವಿಕರನ್ನು ಗುರುವಾರ ಬಿಡುಗಡೆಗೊಳಿಸಲಾಗಿದ್ದು, ಅವರು ಇರಾನ್ ನಿಂದ ನಿರ್ಗಮಿಸಿದ್ದಾರೆ ಎಂದು ಇರಾನ್ ನಲ್ಲಿನ ಭಾರತೀಯ ರಾಜತಾಂತ್ರಿಕ ಕಚೇರಿಯು ತಿಳಿಸಿದೆ.
ಈ ವಿವರಗಳನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ, ಭಾರತದ ರಾಜತಾಂತ್ರಿಕ ಕಚೇರಿ ಹಾಗೂ ಬಂದರ್ ಅಬ್ಬಾಸ್ ನಲ್ಲಿರುವ ಭಾರತೀಯ ದೂತಾವಾಸದೊಂದಿಗೆ ನಿಕಟ ಸಮನ್ವಯ ಹೊಂದಿದ್ದ ಇರಾನ್ ಪ್ರಾಧಿಕಾರಗಳಿಗೆ ಭಾರತೀಯ ರಾಜತಾಂತ್ರಿಕ ಕಚೇರಿಯು ಧನ್ಯವಾದ ಸಲ್ಲಿಸಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಯಮದಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಎಂಎಸ್ಸಿ ಏರೀಸ್ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಐವರು ಭಾರತೀಯ ನಾವಿಕರನ್ನು ಬಿಡುಗಡೆ ಮಾಡಲಾಗಿದೆ ಹಾಗೂ ಇಂದು ಸಂಜೆ ಅವರು ಇರಾನ್ ನಿಂದ ನಿರ್ಗಮಿಸಿದ್ದಾರೆ. ಭಾರತೀಯ ರಾಜತಾಂತ್ರಿಕ ಕಚೇರಿ ಹಾಗೂ ಬಂದರ್ ಅಬ್ಬಾಸ್ ನಲ್ಲಿರುವ ಭಾರತೀಯ ದೂತಾವಾಸದೊಂದಿಗೆ ನಿಕಟ ಸಮನ್ವಯ ಹೊಂದಿದ್ದ ಇರಾನ್ ಪ್ರಾಧಿಕಾರಗಳಿಗೆ ಅಭಿನಂದನೆ ಸಲ್ಲಿಸುತ್ತೇವೆ” ಎಂದು ಹೇಳಿದ್ದಾರೆ.
17 ಭಾರತೀಯ ಪ್ರಜೆಗಳು ಪ್ರಯಾಣಿಸುತ್ತಿದ್ದ ಇಸ್ರೇಲ್ ನೊಂದಿಗೆ ಸಂಪರ್ಕ ಹೊಂದಿದ್ದ ಸರಕು ಸಾಗಣೆ ಹಡಗನ್ನು ಎಪ್ರಿಲ್ 13ರಂದು ಇರಾನ್ ವಶಪಡಿಸಿಕೊಂಡಿತ್ತು.