ಕೇರಳ: ಬಸ್- ಕಾರು ನಡುವೆ ಭೀಕರ ಅಪಘಾತ: ಐವರು ವೈದ್ಯಕೀಯ ವಿದ್ಯಾರ್ಥಿಗಳು ಮೃತ್ಯು
pic | indiatoday.in
ಆಲಪ್ಪುಝ: ಕೇರಳದ ಆಲಪ್ಪುಝ ಜಿಲ್ಲೆಯಲ್ಲಿ ಸರಕಾರಿ ಬಸ್ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಐವರು ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ.
ಮೃತರನ್ನು ಆಲಪ್ಪುಝ ದ ಟಿಡಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ ಲಕ್ಷದ್ವೀಪದ ದೇವಾನಂದನ್, ಮಹಮ್ಮದ್ ಇಬ್ರಾಹಿಂ, ಆಯುಷ್ ಶಾಜಿ, ಶ್ರೀದೀಪ್ ವಲ್ಸನ್ ಮತ್ತು ಮಹಮ್ಮದ್ ಜಬ್ಬಾರ್ ಎಂದು ಗುರುತಿಸಲಾಗಿದೆ. ಮೃತ ಐವರು ವಿದ್ಯಾರ್ಥಿಗಳಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟರೆ, ಇಬ್ಬರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಇತರ ಇಬ್ಬರು ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಆಲಪ್ಪುಝ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಫೆಂಗಲ್ ಚಂಡ ಮಾರುತದಿಂದ ಭಾರೀ ಮಳೆ ಸುರಿಯುತ್ತಿತ್ತು. ಆಲಪ್ಪುಝ ಕಡೆಗೆ ತೆರಳುತ್ತಿದ್ದ ಕಾರು ಮತ್ತು ಗುರುವಾಯೂರಿನಿಂದ ಕಾಯಂಕುಲಂಗೆ ತೆರಳುತ್ತಿದ್ದ ಬಸ್ ನಡುವೆ ಕಲರ್ಕೋಡ್ ಪ್ರದೇಶದಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಅಪಘಾತದಲ್ಲಿ ಬಸ್ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.