ಸುಧಾರಣೆ, ಸಾಧನೆ, ಪರಿವರ್ತನೆಗಳ 5 ವರ್ಷ ; ಪ್ರಧಾನಿಯಿಂದ 17ನೇ ಲೋಕಸಭೆಯ ವಿದಾಯ ಭಾಷಣ
ನರೇಂದ್ರ ಮೋದಿ | Photo: PTI
ಹೊಸದಿಲ್ಲಿ : ದೇಶವು ‘ಬೃಹತ್ ಬದಲಾವಣೆ’ಗಳತ್ತ ದಾಪುಗಾಲಿಡುತ್ತಿದ್ದು 17ನೇ ಲೋಕಸಭೆಯ ಐದು ವರ್ಷಗಳ ಅವಧಿಯು ಸುಧಾರಣೆ, ಸಾಧನೆ ಹಾಗೂ ಪರಿವರ್ತನೆಯ ಯುಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಜೆಟ್ ಅಧಿವೇಶನದ ಕೊನೆಯ ದಿನವಾದ ಶನಿವಾರ ಹದಿನೇಳನೇ ಲೋಕಸಭೆಯ ವಿದಾಯ ಭಾಷಣ ಮಾಡಿದ ಪ್ರಧಾನಿ, ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಅಭೂತಪೂರ್ವ ಸುಧಾರಣೆಗಳನ್ನು ಕೈಗೊಳ್ಳಲಾಗಿದ್ದು, 21ನೇ ಶತಮಾನದ ಭಾರತಕ್ಕೆ ಬಲಿಷ್ಠವಾದ ಬುನಾದಿಯನ್ನು ಹಾಕಲಾಗಿದೆ ಎಂದರು.
‘‘ದೇಶವು ಮಹಾನ್ ಬದಲಾವಣೆಗಳತ್ತ ದಾಪುಗಾಲಿಡುತ್ತಾ ಸಾಗುತ್ತಿದೆ ಹಾಗೂ ಸದನದ ಎಲ್ಲಾ ಸದಸ್ಯರು ಈ ನಿಟ್ಟಿನಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಜನರು ಶತಮಾನಗಳಿಂದ ಕಾಯುತ್ತಿದ್ದಂತಹ ಮಹತ್ವದ ಕೆಲಸಗಳು ಪೂರ್ಣಗೊಂಡಿವೆ ’’ ಎಂದು ಪ್ರಧಾನಿ ಸಂತೃಪ್ತಿ ವ್ಯಕ್ತಪಡಿಸಿದರು.
ತಲೆಮಾರುಗಳಿಂದ ದೇಶದ ಜನತೆ ಒಂದೇ ಸಂವಿಧಾನದ ಕನಸನ್ನು ಕಂಡಿದ್ದರು. ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಈ ಸದನವು ಅದನ್ನು ಸಾಧ್ಯವಾಗಿಸಿದೆ ಎಂದು ಹೇಳಿದ ಮೋದಿ, 17ನೇ ಲೋಕಸಭೆಯ ಅವಧಿಯಲ್ಲಿ ಹಲವಾರು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಹಲವಾರು ಸವಾಲುಗಳನ್ನು ಎದುರಿಸಲಾಯಿತು ಹಾಗೂ ದೇಶಕ್ಕೆ ಸೂಕ್ತ ನಿರ್ದೇಶನವನ್ನು ನೀಡಲಾಯಿತು ಎಂದರು.
‘‘ಈ ಐದು ವರ್ಷಗಳು ಸುಧಾರಣೆ, ಸಾಧನೆ ಹಾಗೂ ಪರಿವರ್ತನೆಯ ಯುಗವಾಗಿತ್ತು. ಸುಧಾರಣೆ, ಸಾಧನೆ ಹಾಗೂ ಪರಿವರ್ತನೆ ನೋಡಲು ಸಿಗುವುದು ತೀರಾ ಅಪರೂಪ. ಇದಕ್ಕಾಗಿ ದೇಶವು 17ನೇ ಲೋಕಸಭೆಯನ್ನು ಅಶೀರ್ವದಿಸುತ್ತಲೇ ಇರುವುದು ಎಂದು ಪ್ರಧಾನಿ ಹೇಳಿದರು.
ಪ್ರಧಾನಿ ಮೋದಿ ತನ್ನ ಭಾಷಣದಲ್ಲಿ ಸಂಸದರು ಹಾಗೂ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೂ ಧನ್ಯವಾದ ಅರ್ಪಿಸಿದರು.
ಬಿರ್ಲಾ ಅವರನ್ನು ಪ್ರಶಂಸಿಸಿದ ಪ್ರಧಾನಿ, ‘‘ಏನೇ ಆಗಲಿ, ನಿಮ್ಮ ಮೊಗದಲ್ಲಿ ಮುಗುಳ್ನಗು ಸದಾ ಇರುತ್ತದೆ. ನೀವು ಈ ಸದನವನ್ನು ನಿಷ್ಪಕ್ಷವಾಗಿ ಮುನ್ನಡೆಸಿದ್ದೀರಿ. ಇದಕ್ಕಾಗಿ ನಾನು ನಿಮ್ಮನ್ನು ಪ್ರಶಂಸಿಸುತ್ತೇನೆ. ಸದನದಲ್ಲಿ ಆಕ್ರೋಶ, ಆರೋಪಗಳ ಸಮಯದಲ್ಲಿಯೂ ನೀವು ಆ ಸನ್ನಿವೇಶಗಳನ್ನು ತಾಳ್ಮೆಯೊಂದಿಗೆ ನಿಭಾಯಿಸಿದ್ದೀರಿ ಹಾಗೂ ಜಾಣತನದಿಂದ ಸದನವನ್ನು ನಡೆಸಿದ್ದೀರಿ’’ ಎಂದು ಹೇಳಿದರು
ಈ ಶತಮಾನ ಕಂಡ ಅತಿ ದೊಡ್ಡ ಬಿಕ್ಕಟ್ಟು ಕೋವಿಡ್ ಸಾಂಕ್ರಾಮಿಕದ ಹಾವಳಿಯ ಸಮಯದಲ್ಲೂ ಬಿರ್ಲಾ ಅವರು ಸಂಸದೀಯ ಕಾರ್ಯಗಳಿಗೆ ಅಡಚಣೆಯಾಗದಿರಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದರು ಹಾಗೂ ಸದನದ ಘನತೆಯನ್ನು ಕಾಪಾಡಿದ್ದರು ಎಂದು ಮೋದಿ ಪ್ರಶಂಸಿಸಿದರು.
ಈ ಮೊದಲು ಸಂಸತ್ಗೆ ನೂತನ ಕಟ್ಟಡದ ಅಗತ್ಯದ ಬಗ್ಗೆ ಮಾತುಗಳನ್ನಾಡಲಾಗುತ್ತಿತ್ತು. ಆದರೆ 17ನೇ ಲೋಕಸಭಾದ ಅವಧಿಯಲ್ಲಿ ಸ್ಪೀಕರ್ ಕೈಗೊಂಡ ನಿರ್ಧಾರವು ಅದನ್ನು ಸಾಕಾರಗೊಳಿಸಿತು ಎಂದರು.
17ನೇ ಲೋಕಸಭಾ ಶೇ.97ರಷ್ಟು ಫಲಪ್ರದಾಯಕವಾಗಿದೆ. ನಾವು 17ನೇ ಲೋಕಸಭೆಯ ಮಕ್ತಾಯದತ್ತ ಸಾಗುತ್ತಿದ್ದೇವೆ ಹಾಗೂ 18ನೇ ಲೋಕಸಭೆಯು ಶೇ.100ಕ್ಕಿಂತಲೂ ಅಧಿಕ ಫಲಪ್ರದವಾಗಬೇಕೆಂಬ ದೃಢಸಂಕಲ್ಪವನ್ನು ನಾವು ಕೈಗೊಳ್ಳಬೇಕಾಗಿದೆ ಎಂದು ಮೋದಿ ಹೇಳಿದರು.
17ನೇ ಲೋಕಸಭೆಯ ಅವಧಿಯಲ್ಲಿ 370ನೇ ವಿಧಿ ರದ್ದತಿ ಹಾಗೂ ತ್ರಿವಳಿ ತಲಾಕ್ ನಿಷೇಧ, ಮಹಿಳಾ ಮೀಸಲಾತಿಯಂತಹ ಮಹತ್ವದ ವಿಧೇಯಕಗಳ ಅಂಗೀಕಾರಗೊಂಡಿರುವುದನ್ನು ಪ್ರಧಾನಿ ತನ್ನ ಭಾಷಣದಲ್ಲಿ ಪ್ರಸ್ತಾವಿಸಿದರು.
ಮುಂದಿನ 25 ವರ್ಷಗಳ ದೇಶಕ್ಕೆ ನಿರ್ಣಾಯಕವಾಗಿವೆ ಎಂದು ಹೇಳಿದ ಪ್ರಧಾನಿ, ಒಂದೆಡೆ ರಾಜಕೀಯ ಆಕಾಂಕ್ಷೆಗಳು , ಇನ್ನೊಂದೆಡೆ ದೇಶಕ್ಕಾಗಿ ಕನಸುಗಳಿವೆ. ಮುಂದಿನ 25 ವರ್ಷಗಳಲ್ಲಿ ದೇಶವು ವಿಕಸಿತ ಭಾರತವಾಗಲಿದೆ ಎಂದವರು ಹೇಳಿದರು.