'ಭೂ ಜಿಹಾದ್' ಮೂಲಕ ಕಬಳಿಸಿದ್ದ 5 ಸಾವಿರ ಎಕರೆ ಭೂಮಿ ವಶ: ಉತ್ತರಾಖಂಡ ಮುಖ್ಯಮಂತ್ರಿ
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಧಾಮಿ (PTI)
ಡೆಹ್ರಾಡೂನ್: ರಾಜ್ಯದಲ್ಲಿ 'ಭೂ ಜಿಹಾದ್' ಮೂಲಕ ಕಬಳಿಸಿದ್ದ 5000 ಎಕರೆ ಭೂಮಿಯನ್ನು ಮುಕ್ತಗೊಳಿಸಲಾಗಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಧಾಮಿ ಹೇಳಿದ್ದಾರೆ.
ದಿಲ್ಲಿಯ ಐಪಿ ಬಡಾವಣೆಯಲ್ಲಿ ನಡೆದ 'ರಾಮ ಕಥೆ'ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಈ ಹಿಮಾಲಯನ್ ರಾಜ್ಯದ ಉನ್ನತಿಗಾಗಿ ನಾವು ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದೇವೆ. ಇದರಲ್ಲಿ ಮುಖ್ಯವಾದದ್ದು ಸರ್ಕಾರಿ ಭೂಮಿಯ ಒತ್ತುವರಿಯನ್ನು ತೆರವುಗೊಳಿಸಿರುವುದು" ಎಂದು ಬಣ್ಣಿಸಿದರು.
"ಭೂ ಜಿಹಾದ್ ನಿಂದ ಭೂಮಿಯನ್ನು ಮುಕ್ತಗೊಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈ ಅಭಿಯಾನ ಅಕ್ರಮ ಮತ್ತು ಬಲವಂತದ ಸ್ವಾಧೀನವನ್ನು ಸಂಪೂರ್ಣವಾಗಿ ತೆರವುಗೊಳಿಸುವವರೆಗೆ ಮುಂದುವರಿಯಲಿದೆ" ಎಂದು ಸ್ಪಷ್ಟಪಡಿಸಿದರು.
ಸರ್ಕಾರಿ ಭೂಮಿಯ ಒತ್ತುವರಿಯಾಗಿದೆ ಎಂದು ಕೇಳಿಬಂದ ಆರೋಪದ ಹಿನ್ನೆಲೆಯಲ್ಲಿ, ಎಲ್ಲ ಅಕ್ರಮ ನಿರ್ಮಾಣಗಳನ್ನು ಪತ್ತೆ ಮಾಡುವಂತೆ ಮುಖ್ಯಮಂತ್ರಿ ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದರು. ರಾಜ್ಯ ಸರ್ಕಾರ ನೀಡಿದ ಅಂಕಿ ಅಂಶಗಳ ಪ್ರಕಾರ 2023ರ ಮೇ ತಿಂಗಳ ವರೆಗೆ 3793 ಕಡೆಗಳಲ್ಲಿ ಒತ್ತುವರಿಯಾಗಿರುವುದನ್ನು ಅಧಿಕಾರಿಗಳು ಗುರುತಿಸಿದ್ದಾರೆ. ನೈನಿತಾಲ್ ಜಿಲ್ಲೆಯಲ್ಲಿ ಗರಿಷ್ಠ ಅಂದರೆ 1433 ಒತ್ತುವರಿ ಪ್ರಕರಣಗಳು ವರದಿಯಾಗಿದ್ದವು. ಹರಿದ್ವಾರದಲ್ಲಿ 1149 ಒತ್ತುವರಿ ಪ್ರಕರಣ ವರದಿಯಾಗಿದ್ದು, ಈ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಚಮೋಲಿ 423 ಪ್ರಕರಣಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ತೆಹ್ರಿ (203) ಅಲ್ಮೋರಾ (192) ಮತ್ತು ಚಂಪಾವತ್ (97) ನಂತರದ ಸ್ಥಾನಗಳಲ್ಲಿವೆ.
ಈ ವರ್ಷದ ಆರಂಭದಲ್ಲಿ ಆರಂಭಿಸಿದ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ 500 ಮಝಾರ್ ಹಾಗೂ 50 ದೇಗುಲಗಳನ್ನು ಧ್ವಂಸಗೊಳಿಸಲಾಗಿದೆ.