ಬಿಸಿಲಿನ ತಾಪಕ್ಕೆ ದೇಶದಲ್ಲಿ 54 ಮಂದಿ ಬಲಿ
ಉತ್ತರ, ಮಧ್ಯ, ಪೂರ್ವ ಭಾರತದ ಹಲವೆಡೆ ಮುಂದುವರಿದ ತಾಪಮಾನ ಏರಿಕೆ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಉತ್ತರ, ಮಧ್ಯ ಮತ್ತು ಪೂರ್ವ ಭಾರತದ ಹಲವೆಡೆಗಳಲ್ಲಿ ತಾಪಮಾನಗಳ ವಿಪರೀತ ಏರಿಕೆ ಹಾಗೂ ಬಿಸಿಲ ಬೇಗೆಯಿಂದ ಕನಿಷ್ಠ 54 ಜನರು ಮೃತಪಟ್ಟಿದ್ದಾರೆ.
ಬಿಸಿಲಿನ ಝಳಕ್ಕೆ ಬಿಹಾರದಲ್ಲಿ 32 ಜನರು ಮೃತಪಟ್ಟರೆ, ಒಡಿಶಾದಲ್ಲಿ 10 ಜನರು ಹಾಗೂ ಜಾರ್ಖಂಡ್ನಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಗುರುವಾರ ರಾಜಸ್ಥಾನ, ಹರ್ಯಾಣ, ದಿಲ್ಲಿ ಮತ್ತು ಚಂಡೀಗಢದ ಹಲವೆಡೆಗಳಲ್ಲಿ ಹಾಗೂ ಉತ್ತರ ಪ್ರದೇಶ, ಬಿಹಾರ, ಒಡಿಶಾ, ಪೂರ್ವ ಮಧ್ಯಪ್ರದೇಶ ಮತ್ತು ವಿದರ್ಭಾದ ಕೆಲವೆಡೆಗಳಲ್ಲಿ ತಾಪಮಾನ 45ರಿಂದ 48 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗಿತ್ತು.
ಹವಾಮಾನ ಇಲಾಖೆಯ ಪ್ರಕಾರ ಪಂಜಾಬ್, ಹರ್ಯಾಣ, ಚಂಡೀಗಢ, ದಿಲ್ಲಿ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಒಡಿಶಾದ ಹಲವೆಡೆ ಮೇ 31 ಮತ್ತು ಜೂನ್ 1ರಂದು ತಾಪಮಾನ ತೀವ್ರವಾಗಿ ಏರಿಕೆಯಾಗುವ ಸಾಧ್ಯತೆಯಿದೆ.
ಈ ನಡುವೆ ಉತ್ತರ ಪ್ರದೇಶದಲ್ಲಿ ಮೇ 31 ಹಾಗೂ ಜೂನ್ 1 ರ ನಡುವೆ ಮತ್ತು ಹರ್ಯಾಣ, ಚಂಡೀಗಢ, ದಿಲ್ಲಿಯಲ್ಲಿ ಮೇ 31ರಂದು ಧೂಳು ಬಿರುಗಾಳಿಯ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.