561 ಮಂದಿಗೆ ಮರಣ ದಂಡನೆ ಶಿಕ್ಷೆ; 19 ವರ್ಷಗಳಲ್ಲೇ ಅಧಿಕ
Photo: freepik
ಹೊಸದಿಲ್ಲಿ: ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಕಾರಾಗೃಹ ವಾಸಿಗಳ ಸಂಖ್ಯೆ 2023ರಲ್ಲಿ 561ಕ್ಕೇರಿದ್ದು, ಇದು 19 ವರ್ಷಗಳಲ್ಲೇ ಅತ್ಯಧಿಕ. 2004ರಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾದ 563 ಮಂದಿ ಜೈಲುಗಳಲ್ಲಿದ್ದರು ಎನ್ನುವುದು ಕೈದಿಗಳಿಗೆ ಸಂಬಂಧಿಸಿದ ಎನ್ ಸಿಆರ್ ಬಿ (National Crime Records Bureau) ದಾಖಲೆಗಳಿಂದ ತಿಳಿದು ಬಂದಿದೆ.
ಹಲವು ಕಾರಣಗಳಿಂದ ಈ ಸಂಖ್ಯೆ ಹೆಚ್ಚಳವಾಗಿದ್ದು, ಮೆಲ್ಮನವಿ ಕೋರ್ಟ್ ಗಳಲ್ಲಿ ಪ್ರಕರಣಗಳ ಇತ್ಯರ್ಥಪಡಿಸುವಿಕೆ ಕಡಿಮೆಯಾಗಿರುವುದು ಮತ್ತು ವಿಚಾರಣಾ ನ್ಯಾಯಾಲಯಗಳು ಮರಣ ದಂಡನೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿಧಿಸುತ್ತಿರುವುದು ಇದಕ್ಕೆ ಮುಖ್ಯ ಕಾರಣ.
ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದ ಪ್ರಾಜೆಕ್ಟ್ 39 ಎ ಸಿದ್ಧಪಡಿಸಿದ ಮರಣ ದಂಡನೆ ಕುರಿತ ವಾರ್ಷಿಕ ವರದಿಯ ಪ್ರಕಾರ, 2023ರಲ್ಲಿ ವಿಚಾರಣಾ ನ್ಯಾಯಾಲಯಗಳು 120 ಮಂದಿಗೆ ಮರಣ ದಂಡನೆ ವಿಧಿಸಿದ್ದು, ಉಳಿದ ಪ್ರಕರಣಗಳು ಈ ಹಿಂದೆ ಇದ್ದವುಗಳಾಗಿವೆ. 2016ರಲ್ಲಿ 156 ಮಂದಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದ್ದಕ್ಕೆ ಹೋಲಿಸಿದರೆ ಈ ಸಂಖ್ಯೆ ಕಡಿಮೆಯಾದರೂ, 488 ಕೈದಿಗಳಿಗೆ ಸಂಬಂಧಿಸಿದ 303 ಪ್ರಕರಣಗಳು 2023ರ ಕೊನೆಗೆ ಹೈಕೋರ್ಟ್ ಗಳಲ್ಲಿ ಬಾಕಿ ಇವೆ. ಇದು 2016ರ ಬಳಿಕ ಗರಿಷ್ಠ ಸಂಖ್ಯೆಯಾಗಿದೆ.
ಈ ಪ್ರವೃತ್ತಿ 2019ರಿಂದಲೂ ಇದ್ದು, ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಹೆಚ್ಚಿನ ಸಂಖ್ಯೆಯ ಮರಣ ದಂಡನೆಯನ್ನು ವಿಚಾರಣಾ ನ್ಯಾಯಾಲಯಗಳು ವಿಧಿಸುತ್ತಿವೆ. 2023ರಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸೇರಿದಂತೆ ಲೈಂಗಿಕ ಅಪರಾಧಗಳಲ್ಲಿ 64 ಮಂದಿಗೆ (ಒಟ್ಟು ಪ್ರಕರಣಗಳ ಶೇಕಡ 53) ಮರಣದಂಡನೆ ವಿಧಿಸಲಾಗಿದೆ. ಇದು 2016ರಲ್ಲಿ ಶಿಕ್ಷೆಗೆ ಗುರಿಯಾದ 27 ಕೈದಿಗಳಿಗೆ ಹೋಲಿಸಿದರೆ ಅಧಿಕ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸಂತ್ರಸ್ತೆಯರನ್ನು ಒಳಗೊಂಡ ಶೇಕಡ 75ರಷ್ಟು ಪ್ರಕರಣಗಳಲ್ಲಿ ಮರಣದಂಡನೆ ವಿಧಿಸಲಾಗಿದೆ.