ದಿಲ್ಲಿ ಅಬಕಾರಿ ನೀತಿ ಹಗರಣ: ಅರವಿಂದ ಕೇಜ್ರಿವಾಲ್ ಗೆ 5ನೇ ಸಮನ್ಸ್
ಕೇಜ್ರಿವಾಲ್ | Photo; ANI
ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ 5ನೇ ಸಮನ್ಸ್ ಕಳುಹಿಸಿದೆ. ಜಾರಿ ನಿರ್ದೇಶನಾಲಯದ ಕೇಜ್ರಿವಾಲ್ ಅವರಿಗೆ ಈಗಾಗಲೇ 4 ಸಮನ್ಸ್ ಗಳನ್ನು ನೀಡಿದೆ.
ದಿಲ್ಲಿ ಅಬಕಾರಿ ನೀತಿ ಪ್ರಕರಣದ ಕುರಿತಂತೆ ನಡೆಯುತ್ತಿರುವ ತನ್ನ ತನಿಖೆಗೆ ಸಂಬಂಧಿಸಿ ಫೆಬ್ರವರಿ 2ರಂದು ನಡೆಯುವ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಕೇಜ್ರಿವಾಲ್ ಅವರಿಗೆ ನಿರ್ದೇಶಿಸಿದೆ.
ಈ ಹಿಂದೆ ಜನವರಿ 18ರಂದು ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿ ತನ್ನ ಮುಂದೆ ಹಾಜರಾಗುವಂತೆ ಅರವಿಂದ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು. ಕೇಜ್ರಿವಾಲ್ ಅವರು ಅಂದು ಈ.ಡಿ. ಮುಂದೆ ಹಾಜರಾಗಿರಲಿಲ್ಲ. ಅವರು ಗೋವಾಕ್ಕೆ ತೆರಳಿದ್ದರು.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಸೂಚನೆಯಂತ ತನ್ನನ್ನು ಬಂಧಿಸುವುದು ಜಾರಿ ನಿರ್ದೇಶನಾಲಯದ ಉದ್ದೇಶವಾಗಿದೆ ಎಂದು ಆರೋಪಿಸಿ ಅರವಿಂದ್ ಕೇಜ್ರಿವಾಲ್ ಅವರು ಇದುವರೆಗಿನ ನಾಲ್ಕು ಸಮನ್ಸ್ ಗಳಿಗೆ ಹಾಜರಾಗಿರಲಿಲ್ಲ.
ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ನಂಟು ಹೊಂದಿದ ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಈ ಸಮನ್ಸ್ ಜಾರಿ ಮಾಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಅವರ ಪಕ್ಷದ ಸಹೋದ್ಯೋಗಿಗಳಾದ ಮನೀಷ್ ಸಿಸೋಡಿಯಾ ಹಾಗೂ ಸತ್ಯೇಂದ್ರ ಜೈನ್ ಅವರು ಕಾರಾಗೃಹದಲ್ಲಿ ಇದ್ದಾರೆ. ಸದ್ಯ ಸತ್ಯೇಂದ್ರ ಜೈನ್ ಜೈಲಿನಿಂದ ಹೊರಗೆ ಇದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಕೇಜ್ರಿವಾಲ್ ಅವರಿಗೆ ಈ ವರ್ಷ ಜನವರಿ 3, ಜನವರಿ 18 ಹಾಗೂ ಕಳೆದ ವರ್ಷ ನವೆಂಬರ್ 2, ಡಿಸೆಂಬರ್ 21ರಂದು ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು.
ನಾವು 5ನೇ ಸಮನ್ಸ್ ಸ್ವೀಕರಿಸಿದ್ದೇವೆ. ಆಪ್ ನ ಕಾನೂನು ತಜ್ಞರ ತಂಡ ಜಾರಿ ನಿರ್ದೇಶನಾಲಯದ ನೋಟಿಸ್ ಅನ್ನು ಅಧ್ಯಯನ ನಡೆಸುತ್ತಿದೆ. ಅದು ಕಾನೂನಿಗೆ ಅನುಗುಣವಾಗಿ ನಿರ್ಣಯ ತೆಗೆದುಕೊಳ್ಳಲಿದೆ. ಈ ಹಿಂದಿನ ಸಮನ್ಸ್ ಕಾನೂನು ಬಾಹಿರವಾಗಿತ್ತು. ನಾವು ಜಾರಿ ನಿರ್ದೇಶನಾಲಯದಿಂದ ಪ್ರತಿಕ್ರಿಯೆ ಕೋರಿದ್ದೇವೆ ಎಂದು ಆಪ್ನ ರಾಷ್ಟ್ರೀಯ ಮುಖ್ಯ ವಕ್ತಾರ ಪ್ರಿಯಾಂಕ ಕಕ್ಕರ್ ತಿಳಿಸಿದ್ದಾರೆ.