ಕಳೆದ 5 ವರ್ಷಗಳಲ್ಲಿ ವಿದೇಶಗಳಲ್ಲಿ 633 ಭಾರತೀಯ ವಿದ್ಯಾರ್ಥಿಗಳು ಮೃತ್ಯು | ಕೆನಡಾದಲ್ಲೇ ಗರಿಷ್ಠ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಕಳೆದ ಐದು ವರ್ಷಗಳಲ್ಲಿ 41 ದೇಶಗಳಲ್ಲಿ ಕನಿಷ್ಠ 633 ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಂಸತ್ತಿನಲ್ಲಿ ತಿಳಿಸಿದೆ.
ಶುಕ್ರವಾರ ಲೋಕಸಭೆಯಲ್ಲಿ ಕೇರಳದ ಸಂಸದ ಕೊಡಿಕುನ್ನಿಲ್ ಸುರೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ಕೀರ್ತಿವರ್ಧನ್ ಸಿಂಗ್ ಅವರು, ಕೆನಡಾದಲ್ಲಿ 172 ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ 108, ಬ್ರಿಟನ್ನಲ್ಲಿ 58, ಆಸ್ಟ್ರೇಲಿಯಾದಲ್ಲಿ 57, ರಶ್ಯಾದಲ್ಲಿ 37 ಮತ್ತು ಜರ್ಮನಿಯಲ್ಲಿ 24 ಸಾವುಗಳು ಸಂಭವಿಸಿವೆ ಎಂದು ತಿಳಿಸಿದರು.
ಕೇಂದ್ರವು ಒದಗಿಸಿರುವ ಮಾಹಿತಿಯ ಪ್ರಕಾರ ಪಾಕಿಸ್ತಾನದಲ್ಲಿಯೂ ಓರ್ವ ಭಾರತೀಯ ವಿದ್ಯಾರ್ಥಿ ಮೃತಪಟ್ಟಿದ್ದಾನೆ.
ಕಳೆದ ಐದು ವರ್ಷಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಒಟ್ಟು ಸಾವುಗಳ ಪೈಕಿ 19 ಹಿಂಸಾಚಾರದಿಂದ ಸಂಭವಿಸಿವೆ. ಕೆನಡಾ ಒಂಭತ್ತು ಸಾವುಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಅಮೆರಿಕ (6) ಮತ್ತು ಆಸ್ಟ್ರೇಲಿಯಾ, ಚೀನಾ, ಬ್ರಿಟನ್ ಮತ್ತು ಕಿರ್ಗಿಸ್ತಾನ (ತಲಾ ಒಂದು) ನಂತರದ ಸ್ಥಾನಗಳಲ್ಲಿವೆ.
ಜ.1ಕ್ಕೆ ಇದ್ದಂತೆ 101 ದೇಶಗಳಲ್ಲಿ 13.35 ಲಕ್ಷ ಭಾರತೀಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. 4.27 ಲಕ್ಷ ವಿದ್ಯಾರ್ಥಿಗಳೊಂದಿಗೆ ಕೆನಡಾ ಅಗ್ರಸ್ಥಾನದಲ್ಲಿದ್ದು, ಅಮೆರಿಕ (3.37 ಲಕ್ಷ),ಬ್ರಿಟನ್ (1.85 ಲಕ್ಷ),ಆಸ್ಟ್ರೇಲಿಯಾ (1.22 ಲಕ್ಷ), ಜರ್ಮನಿ (42,997),ಯುಎಇ (25,000) ಮತ್ತು ರಶ್ಯಾ (24,940) ನಂತರದ ಸ್ಥಾನಗಳಲ್ಲಿವೆ.
ವಿದೇಶಗಳಲ್ಲಿಯ ಭಾರತೀಯ ರಾಯಭಾರಿ ಕಚೇರಿಗಳು/ದೂತಾವಾಸಗಳು ಅಲ್ಲಿಯ ವಿವಿಗಳಲ್ಲಿ ದಾಖಲಾಗಿರುವ ಭಾರತೀಯ ವಿದ್ಯಾರ್ಥಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರುತ್ತವೆ ಎಂದು ಸಿಂಗ್ ತಿಳಿಸಿದರು.
ವಿದೇಶಿ ವಿವಿಗಳಲ್ಲಿ ಪ್ರವೇಶ ಪಡೆದ ಭಾರತೀಯ ವಿದ್ಯಾರ್ಥಿಗಳನ್ನು ಅಲ್ಲಿಯ ಭಾರತೀಯ ರಾಯಭಾರ ಕಚೇರಿಗಳು ಆಯೋಜಿಸುವ ಸ್ವಾಗತ ಸಮಾರಂಭಗಳಿಗೆ ಆಹ್ವಾನಿಸಲಾಗುತ್ತದೆ. ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುವ ಕಾರ್ಯಕ್ರಮಗಳಲ್ಲಿ ಅವರು ವಿದೇಶದಲ್ಲಿ ತಮ್ಮ ವಾಸ್ತವ್ಯದ ಅವಧಿಯಲ್ಲಿ ಎದುರಿಸಬಹುದಾದ ಸವಾಲುಗಳು ಮತ್ತು ಬೆದರಿಕೆಗಳು ಹಾಗೂ ಅವುಗಳನ್ನು ಹೇಗೆ ಎದುರಿಸಬೇಕು ಎಂಬ ಕುರಿತು ಮಾಹಿತಿಗಳನ್ನು ನೀಡಲಾಗುತ್ತದೆ. ಭಾರತೀಯ ವಿದ್ಯಾರ್ಥಿಗಳು ಮತ್ತು ಭಾರತೀಯ ವಿದ್ಯಾರ್ಥಿಗಳ ಸಂಘಗಳೊಂದಿಗೆ ಸಂವಹನಕ್ಕಾಗಿ ಭಾರತೀಯ ರಾಯಭಾರಿ ಕಚೇರಿಗಳು/ದೂತಾವಾಸಗಳ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಗಳು ವಿದೇಶಿ ವಿವಿಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ನಿಯಮಿತ ಭೇಟಿಗಳನ್ನೂ ನೀಡುತ್ತಿರುತ್ತಾರೆ ಎಂದು ಅವರು ತಿಳಿಸಿದರು.