ಹೊಟ್ಟೆಯಲ್ಲಿ ಬ್ಯಾಟರಿ, ಚೈನ್, ಸ್ಕ್ರೂ ಸೇರಿದಂತೆ 65 ವಸ್ತುಗಳು ಪತ್ತೆ: ಶಸ್ತ್ರಚಿಕಿತ್ಸೆ ಬಳಿಕ ಬಾಲಕ ಮೃತ್ಯು
ಮೃತ ಬಾಲಕ ಹಾಗೂ ಆತನ ಹೊಟ್ಟೆಯಲ್ಲಿ ಪತ್ತೆಯಾದ ವಸ್ತುಗಳ ಎಕ್ಸ್ರೇPC: x.com/bstvlive
ಆಗ್ರಾ: ಸುಮಾರು ಐದು ತಾಸುಗಳ ಸುಧೀರ್ಘ ಮತ್ತು ಸಂಕೀರ್ಣ ಶಸ್ತ್ರಚಿಕಿತ್ಸೆ ಬಳಿಕ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯ ವೈದ್ಯರು 14 ವರ್ಷ ವಯಸ್ಸಿನ ಬಾಲಕನ ಹೊಟ್ಟೆಯಲ್ಲಿದ್ದ ಬ್ಯಾಟರಿ, ಚೈನ್, ರೇಜರ್ ಬ್ಲೇಡ್, ಸ್ಕ್ರೂ ಸೇರಿದಂತೆ 65 ವಸ್ತುಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರೂ, ಶಸ್ತ್ರಚಿಕಿತ್ಸೆ ಮುಗಿದ ಒಂದು ತಾಸಿನಲ್ಲಿ ಬಾಲಕ ಮೃತಪಟ್ಟ ಘಟನೆ ವರದಿಯಾಗಿದೆ.
ಉತ್ತರ ಪ್ರದೇಶದ ಹಾತ್ರಾಸ್ನ ಆದಿತ್ಯ ಶರ್ಮಾ ಎಂಬ ಬಾಲಕನನ್ನು ಆಸ್ಪತ್ರೆಗೆ ಕರೆ ತಂದಾಗ ಈತನ ಹೊಟ್ಟೆಯಲ್ಲಿ ಇಂಥ ವಸ್ತುಗಳು ಇರುವುದನ್ನು ವೈದ್ಯರು ಪತ್ತೆ ಮಾಡಿದರು. ಕರುಳಿನ ಸೋಂಕಿನಿಂದ ಆತ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ. ಈ ಹಿಂದೆ ಈತ ಈ ವಸ್ತುಗಳನ್ನು ನುಂಗಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹತ್ರಾಸ್ನ ಔಷಧ ಕಂಪನಿಯ ಪ್ರತಿನಿಧಿಯಾಗಿರುವ ತಂದೆ ಸಂಕೇತ್ ಶರ್ಮಾ ಅವರ ಪ್ರಕಾರ, ಅಕ್ಟೋಬರ್ 13ರಿಂದ ಬಾಲಕನಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಆಗ್ರಾ ಆಸ್ಪತ್ರೆಯನ್ನು ಸಂಪರ್ಕಿಸಲಾಗಿತ್ತು. ಮುಂದಿನ ಎರಡು ವಾರಗಳಲ್ಲಿ ಸೂಕ್ತ ಚಿಕಿತ್ಸೆಗಾಗಿ ಪೋಷಕರು ಜೈಪುರ, ಅಲೀಗಢ, ನೋಯ್ಡಾ ಮತ್ತು ದೆಹಲಿ ಹೀಗೆ ನಾಲ್ಕು ನಗರಗಳಿಗೆ ಅಲೆದಾಡಿದ್ದರು. ಆದರೆ ಅಕ್ಟೋಬರ್ 28 ರಂದು ಆತ ಮೃತಪಟ್ಟಿದ್ದಾನೆ.
9ನೇ ತರಗತಿ ವಿದ್ಯಾರ್ಥಿಯಾಗಿದ್ದ ಆದಿತ್ಯ ತನ್ನ ಏಕೈಕ ಪುತ್ರ. ಈ ಮೊದಲು ಆತನಿಗೆ ಯಾವುದೇ ದೈಹಿಕ ಅಥವಾ ಮಾನಸಿಕ ಕಾಯಿಲೆಗಳು ಇರಲಿಲ್ಲ ಎಂದು ತಂದೆ ಹೇಳಿದ್ದಾರೆ.
ಅಕ್ಟೋಬರ್ 19ರಂದು ಸ್ಕ್ಯಾನ್ ಮತ್ತು ಪರೀಕ್ಷಾ ವರದಿಗಳು ಬಂದ ಬಳಿಕ ಜೈಪುರ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಎರಡು ದಿನಗಳಲ್ಲಿ ಉಸಿರಾಟ ಸಮಸ್ಯೆ ಹೆಚ್ಚಿದಾಗ ಆತನನ್ನು ಅಲೀಗಢಕ್ಕೆ ಸೇರಿಸಲಾಗಿತ್ತು. ಶ್ವಾಸನಾಳದಲ್ಲಿದ್ದ ತಡೆಯನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದರು.
ಆದರೆ ಹೊಟ್ಟೆನೋವು ಅಕ್ಟೋಬರ್ 26ರಂದು ತೀವ್ರಗೊಂಡಾಗ ಆತನ ಹೊಟ್ಟೆಯಲ್ಲಿ 19 ವಸ್ತುಗಳು ಇರುವುದು ಸ್ಕ್ಯಾನಿಂಗ್ ವೇಳೆ ಪತ್ತೆಯಾಯಿತು. ಅದೇ ದಿನ ನೋಯ್ಡಾದ ಖಾಸಗಿ ಆಸ್ಪತ್ರೆಗೆ ಹಾಗೂ ಅಲ್ಲಿಂದ ಸಪ್ಧರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.