ಕೇರಳ | ಟ್ಯಾಂಕರ್ನಿಂದ ಅನಿಲ ಸೋರಿಕೆ: 8 ಮಂದಿ ಕಾಲೇಜು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು
ಸಾಂಧರ್ಬಿಕ | PC : Meta AI
ಕಣ್ಣೂರು : ಟ್ಯಾಂಕರ್ ಲಾರಿಯಿಂದ ಅನಿಲ ಸೋರಿಕೆಯಾದ ಪರಿಣಾಮ ಕನಿಷ್ಠ ಎಂಟು ಮಂದಿ ಕಾಲೇಜು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಕಣ್ಣೂರು ಜಿಲ್ಲೆಯ ರಾಮಾಪುರಂ ಗ್ರಾಮದಲ್ಲಿ ನಡೆದಿದೆ.
ಅನಿಲ ಸೋರಿಕೆಯಿಂದ ಅಸ್ವಸ್ಥತೆ ಮತ್ತು ಉಸಿರಾಟದ ತೊಂದರೆಗೆ ಗುರಿಯಾದ ವಿದ್ಯಾರ್ಥಿಗಳನ್ನು ಕೂಡಲೇ ಪರಿಯಾರಂ ವೈದ್ಯಕೀಯ ಕಾಲೇಜು ಹಾಗೂ ಪಳಯಂಗಡಿ ತಾಲ್ಲೂಕು ಅಸ್ಪತ್ರೆಗೆ ದಾಖಲಿಸಲಾಯಿತು.
ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕದಿಂದ ಎರ್ನಾಕುಲಂಗೆ ತೆರಳುತ್ತಿದ್ದ ಟ್ಯಾಂಕರ್ ಲಾರಿಯಲ್ಲಿನ ಹೈಡ್ರೋಕ್ಲೋರಿಕ್ ಆಸಿಡ್ ಶುಕ್ರವಾರ ಸೋರಿಕೆಯಾಗಿದ್ದರಿಂದ ಈ ಘಟನೆ ನಡೆದಿದೆ.
ಸುದ್ದಿ ತಿಳಿದು ಪಯ್ಯನ್ನೂರ್ ಅಗ್ನಿಶಾಮಕ ದಳ ಹಾಗೂ ಪರಿಯಾಯಂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮುಂದಿನ ಕಾರ್ಯಾಚರಣೆ ಕೈಗೊಂಡರಾದರೂ, ಅನಿಲ ಸೋರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನಿಲ ಸೋರಿಕೆಯು ಟ್ಯಾಂಕರ್ ಲಾರಿಯ ಹಿಂಬದಿಯ ವಾಲ್ವ್ನಲ್ಲಿ ಕಂಡು ಬಂದಿದ್ದು, ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ಲಾರಿಯನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ.
ಅನಿಲವನ್ನು ಮತ್ತೊಂದು ಟ್ಯಾಂಕರ್ಗೆ ಭರ್ತಿ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಳಿಪ್ಪರಂಬ ಕಂದಾಯ ಉಪ ವಿಭಾಗಾಧಿಕಾರಿ ಅಜಯ್ ಕುಮಾರ್ ತಿಳಿಸಿದ್ದಾರೆ.