ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ : ಕನಿಷ್ಠ 10 ಸಾವು, ಹಲವರಿಗೆ ಗಾಯ
Photo: ANI
ಚೆನ್ನೈ : ತಮಿಳುನಾಡಿನ ವಿರುದ್ಧುನಗರ್ ಜಿಲ್ಲೆಯ ವೆಂಬಕೊಟ್ಟೈಯ ಪಟಾಕಿ ಉತ್ಪಾದನಾ ಘಟಕವೊಂದರಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ.
ಪಟಾಕಿ ತಯಾರಿಕ ಘಟಕದ ರಾಸಾಯನಿಕ ಮಿಶ್ರಣ ಮಾಡುವ ಕೊಠಡಿಯಲ್ಲಿ ಶನಿವಾರ ಅಪರಾಹ್ನ ಸುಮಾರು 12.30ಕ್ಕೆ ಸ್ಫೋಟ ಸಂಭವಿಸಿತು. 9 ಮಂದಿ ಸ್ಥಳದಲ್ಲೇ ಮೃತಪಟ್ಟರು. ಗಂಭೀರ ಗಾಯಗೊಂಡ ಮೂವರನ್ನು ಶಿವಕಾಶಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆದರೆ, ಅವರಲ್ಲಿ ಒಬ್ಬರು ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾರೆ ಎಂದು ವಿರುದ್ದುನಗರ್ ಜಿಲ್ಲಾಧಿಕಾರಿ ವಿ.ಪಿ. ಜಯಶೀಲ ತಿಳಿಸಿದ್ದಾರೆ.
ರಾಸಾನಿಯಕ ಮಿಶ್ರಣ ಮಾಡುವ ಕೊಠಡಿಯಲ್ಲಿ ಜನದಟ್ಟಣೆ ಇತ್ತು. ರಾಸಾಯನಿಕವನ್ನು ನಿರ್ವಹಿಸುವ ಸಂದರ್ಭ ಸ್ಪೋಟ ಸಂಭವಿಸಿರಬಹುದು. ಕಾರ್ಖಾನೆಯ ಮಾಲಕನಿಗೆ ಘಟಕ ನಡೆಸಲು ಪರವಾನಿಗೆ ಇದೆ ಎಂದು ಅವರು ತಿಳಿಸಿದ್ದಾರೆ.
ಸ್ಫೋಟ ಹೇಗೆ ಸಂಭವಿಸಿತು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಯಶೀಲ ಅವರು, ಮಾನವ ದೋಷದಿಂದ ಸ್ಫೋಟ ಸಂಭವಿಸಿರಬಹುದು. ನಾವು ಅಂತರ್ ಇಲಾಖಾ ತಂಡದಿಂದ ಕೂಲಂಕಷ ತನಿಖೆಗೆ ಆದೇಶ ನೀಡಿದ್ದೇವೆ ಎಂದಿದ್ದಾರೆ.
ಘಟನೆ ಕುರಿತು ಸಂತಾಪ ವ್ಯಕ್ತಪಡಿಸಿರುವ ತಮಿಳುನಾಡ ಮುಖ್ಯಮಂತ್ರಿ ಸ್ಟಾಲಿನ್, ಮೃತಪಟ್ಟವರ ಕುಟುಂಬದ ಸದಸ್ಯರಿಗೆ 3 ಲಕ್ಷ ರೂಪಾಯಿ ಹಾಗೂ ಗಂಭೀರ ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.