ಕಳೆದ ಐದು ವರ್ಷಗಳಲ್ಲಿ ಗುಜರಾತಿನಲ್ಲಿ 81 ಕಸ್ಟಡಿ ಸಾವುಗಳು
ಇದು ದೇಶದಲ್ಲಿಯೇ ಅತ್ಯಂತ ಹೆಚ್ಚು
Photo: ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ: ಕಳೆದ ಐದು ವರ್ಷಗಳಲ್ಲಿ ಅತ್ಯಂತ ಹೆಚ್ಚಿನ ಕಸ್ಟಡಿ ಸಾವುಗಳು ಗುಜರಾತಿನಲ್ಲಿ ಸಂಭವಿಸಿದ್ದು, ಇಂತಹ 81 ಪ್ರಕರಣಗಳು ಅಲ್ಲಿ ವರದಿಯಾಗಿವೆ. 80 ಸಾವುಗಳೊಂದಿಗೆ ಮಹಾರಾಷ್ಟ್ರ ನಂತರದ ಸ್ಥಾನದಲ್ಲಿದೆ ಎಂದು ಕೇಂದ್ರ ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ಅವರು ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದರು.
2018, ಎ.1 ಮತ್ತು 2023, ಮಾ.31ರ ನಡುವಿನ ಐದು ವರ್ಷಗಳ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ 687 ಜನರು ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ ಎಂದು ಲಿಖಿತ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ಅವರು ತಿಳಿಸಿದರು.
ಈ ಅವಧಿಯಲ್ಲಿ ಮಧ್ಯಪ್ರದೇಶದಲ್ಲಿ 50, ಬಿಹಾರದಲ್ಲಿ 47,ಉತ್ತರ ಪ್ರದೇಶದಲ್ಲಿ 41 ಮತ್ತು ತಮಿಳುನಾಡಿನಲ್ಲಿ 36 ಕಸ್ಟಡಿ ಸಾವುಗಳು ಸಂಭವಿಸಿವೆ ಎಂದರು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಒದಗಿಸಿದ ಅಂಕಿಅಂಶಗಳನ್ನು ಉಲ್ಲೇಖಿಸಿದ ರಾಯ್, ಪೊಲೀಸ್ ಕಸ್ಟಡಿಯಲ್ಲಿ 2022-23ರಲ್ಲಿ 164, 2021-22ರಲ್ಲಿ 175,2020-21ರಲ್ಲಿ 100, 2019-20ರಲ್ಲಿ 112 ಮತ್ತು 2018-19ರಲ್ಲಿ 136 ಸಾವುಗಳು ಸಂಭವಿಸಿವೆ ಎಂದು ತಿಳಿಸಿದರು.