ಪ್ರಧಾನಿಗೆ ಅವರ ಭರವಸೆ ನೆನಪಿಸಲು ರಕ್ತದಲ್ಲಿ ಪತ್ರ ಬರೆದ ಬಿಜೆಪಿ ಶಾಸಕ
ನೀರಜ್ ಜಿಂಬಾ | Photo credit: telegraphindia.com
ಸಿಲಿಗುರಿ(ಪ.ಬಂ): ‘ಗೂರ್ಖಾಗಳ ಕನಸುಗಳು ನನ್ನ ಕನಸುಗಳು’ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ನೆನಪಿಸಲು ದಾರ್ಜಿಲಿಂಗ್ನ ಬಿಜೆಪಿ ಶಾಸಕ ನೀರಜ್ ಜಿಂಬಾ ಅವರಿಗೆ ತನ್ನ ರಕ್ತದಲ್ಲಿ ಪತ್ರವನ್ನು ಬರೆದಿದ್ದು, ಗೂರ್ಖಾಗಳ ಸಮಸ್ಯೆಗಳಲ್ಲಿ ಉನ್ನತ ಮಟ್ಟದ ಹಸ್ತಕ್ಷೇಪವನ್ನು ಕೋರಿದ್ದಾರೆ.
2014,ಎ.10ರಂದು ಸಿಲಿಗುರಿ ಸಮೀಪದ ಖಪ್ರೈಲ್ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಸಂದರ್ಭ ಮೋದಿಯವರು ಘೋಷಿಸಿದ್ದ ‘ಗೂರ್ಖಾಗಳ ಕನಸುಗಳು ನನ್ನ ಕನಸುಗಳು’ ಭರವಸೆ ಇನ್ನೂ ಈಡೇರಿಲ್ಲ ಎಂದು ಪತ್ರದಲ್ಲಿ ಹೇಳಿರುವ ಜಿಂಬಾ, ‘ಅತ್ಯಂತ ಮಹತ್ವದ ವಿಷಯದತ್ತ ನಿಮ್ಮ ಗಮನವನ್ನು ಸೆಳೆಯಲು ನಾನು ನನ್ನ ಸ್ವಂತ ರಕ್ತವನ್ನು ಬಳಸಿ ಈ ಪತ್ರವನ್ನು ಬರೆಯುತ್ತಿದ್ದೇನೆ. ರಾಜಕೀಯವಾಗಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಮತ್ತು ಉಳಿದಿರುವ 11 ಗೂರ್ಖಾ ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಸ್ಥಾನಮಾನವನ್ನು ನೀಡುವ ಮೂಲಕ ಗೂರ್ಖಾಗಳ ಸಮಸ್ಯೆಗಳನ್ನು ಬಗೆಹರಿಸುವ ಬದ್ಧತೆಯು ಇನ್ನೂ ಕಾರ್ಯರೂಪಕ್ಕೆ ಬರಬೇಕಿದೆ. ಲಡಾಖಿಗಳು, ಕಾಶ್ಮೀರಿಗಳು, ಮಿಝೋಗಳು, ನಾಗಾಗಳು ಮತ್ತು ಬೋಡೊಗಳಿಗೆ ನ್ಯಾಯವನ್ನು ಒದಗಿಸಲಾಗಿದೆಯಾದರೂ ಗೂರ್ಖಾಗಳು ನಿರ್ಲಕ್ಷ್ಯದಲ್ಲಿಯೇ ನರಳುತ್ತಿದ್ದಾರೆ. ಈ ಅನಿಶ್ಚಿತ ವಾಸ್ತವವು ಕೇಂದ್ರ ಸರಕಾರದೊಳಗಿನ ರಾಜಕೀಯ ಇಚ್ಛಾಶಕ್ತಿಯ ಕೊರತೆಯ ಕಟುವಾದ ಪ್ರತಿಬಿಂಬವಾಗಿದೆ. ನೀವು ಭಾರತೀಯ ಗೂರ್ಖಾಗಳಿಗೆ ನ್ಯಾಯವನ್ನೊದಗಿಸಬೇಕಾದ ಸಮಯವು ಬಂದಿದೆ ’ ಎಂದು ತಿಳಿಸಿದ್ದಾರೆ.
ದಾರ್ಜಿಲಿಂಗ್ ಕ್ಷೇತ್ರವು 2009ರಿಂದ ಮೂವರು ಸಂಸದರನ್ನು ಲೋಕಸಭೆಗೆ ಕಳುಹಿಸಿದೆ. ಜಸ್ವಂತ ಸಿಂಗ್ (2009-2014),ಎಸ್.ಎಸ್.ಅಹ್ಲುವಾಲಿಯಾ (2014-2019) ಅವರು ಈ ಹಿಂದೆ ಸಂಸದರಾಗಿದ್ದು,ರಾಜು ಬಿಸ್ತಾ ಅವರು ಹಾಲಿ ಸಂಸದರಾಗಿದ್ದಾರೆ. ಅಲ್ಲದೆ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರೀ ಅಂತರದಿಂದ ಗೆದ್ದಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಸ್ತಾ ಅವರು ಟಿಎಂಸಿ ಅಭ್ಯರ್ಥಿಯನ್ನು ನಾಲ್ಕು ಲಕ್ಷಕ್ಕೂ ಅಧಿಕ ಮತಗಳಿಂದ ಪರಾಭವಗೊಳಿಸಿದ್ದರು.
1980ರಿಂದ ಪ್ರತ್ಯೇಕ ಗೂರ್ಖಾಲ್ಯಾಂಡ್ ಬೇಡಿಕೆಯು ಈ ಗುಡ್ಡಗಾಡು ಪ್ರದೇಶದ ರಾಜಕೀಯದಲ್ಲಿ ಪ್ರಾಬಲ್ಯವನ್ನು ಪಡೆದುಕೊಂಡಿದ್ದು,ಆಗಾಗ್ಗೆ ಹಿಂಸಾತ್ಮಕ ಆಂದೋಲನಗಳಿಗೂ ಈ ಪ್ರದೇಶವು ಸಾಕ್ಷಿಯಾಗಿದೆ. 2017ರಲ್ಲಿ ಆರ್ಥಿಕ ದಿಗ್ಬಂಧನದ ಸಂದರ್ಭದಲ್ಲಿ 11 ಜನರು ಮೃತಪಟ್ಟಿದ್ದರು.
2019ರಲ್ಲಿ ಬಿಜೆಪಿಯು 11 ಗುಡ್ಡಗಾಡು ಸಮುದಾಯಗಳಿಗೆ ಬುಡಕಟ್ಟು ಸ್ಥಾನಮಾನ ಮತ್ತು ಶಾಶ್ವತ ರಾಜಕೀಯ ಪರಿಹಾರವನ್ನು ಒದಗಿಸುವ ಭರವಸೆಯನ್ನು ನೀಡಿತ್ತು. ಆದರೆ ಆಗಿನಿಂದಲೂ ಈ ಭರವಸೆಯು ಕೇವಲ ಭರವಸೆಯಾಗಿಯೇ ಉಳಿದುಕೊಂಡಿದೆ. ರಾಜ್ಯದ ವಿಭಜನೆ ಮತ್ತು ಗೂರ್ಖಾಲ್ಯಾಂಡ್ ರಚನೆಯನ್ನು ಟಿಎಂಸಿ ವಿರೋಧಿಸಿದೆ