ಪೊಲೀಸರಿಂದ ‘ದಿ ವೈರ್’ ಸಂಪಾದಕರ ಸಾಧನಗಳ ವಶ ಪ್ರಕರಣ: ಹಿಂದಿರುಗಿಸುವ ಆದೇಶ ಎತ್ತಿ ಹಿಡಿದ ದಿಲ್ಲಿ ನ್ಯಾಯಾಲಯ
Photo:support.thewire.in
ಹೊಸದಿಲ್ಲಿ: ಕಳೆದ ವರ್ಷ ‘ದಿ ವೈರ್’ ಸಂಪಾದಕರಿಂದ ವಶಪಡಿಸಿಕೊಂಡ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಹಿಂದಿರುಗಿಸುವಂತೆ ಪೊಲೀಸರಿಗೆ ನಿರ್ದೇಶಿಸಿ ನೀಡಿದ ಆದೇಶವನ್ನು ದಿಲ್ಲಿ ನ್ಯಾಯಾಲಯ ಎತ್ತಿ ಹಿಡಿದಿದೆ.
‘ದಿ ವೈರ್’ನ ಕಚೇರಿ ಹಾಗೂ ಅದರ ನಾಲ್ವರು ಸಂಪಾದಕರಾದ ಸಿದ್ಧಾರ್ಥ್ ವರದರಾಜನ್, ಎಂ.ಕೆ. ವೇಣು, ಸಿದ್ಧಾರ್ಥ ಭಾಟಿಯಾ ಹಾಗೂ ಜಾಹ್ನವಿ ಸೇನ್ ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಸಂದರ್ಭ ಪೊಲೀಸರು ಈ ಸಾಧನಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಸಂಸ್ಥೆಯ ವ್ಯವಹಾರ ಮುಖ್ಯಸ್ಥ ಮಿಥುನ್ ಕಿಡಂಬಿ ಅವರ ನಿವಾಸದಲ್ಲಿ ಕೂಡ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು.
ಬಿಜೆಪಿ ನಾಯಕ ಅಮಿತ್ ಮಾಲವಿಯ ಅವರು ದಾಖಲಿಸಿದ ಎಫ್ಐಆರ್ನ ತನಿಖೆಯ ಭಾಗವಾಗಿ ಈ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಎಫ್ಐಆರ್ನಲ್ಲಿ ಅಮಿತ್ ಮಾಲವಿಯ ಅವರು, ‘ದಿ ವೈರ್’ನ ಸಂಪಾದಕರ ವಿರುದ್ಧ ವಂಚನೆ, ನಕಲಿ, ಮಾನಹಾನಿ ಹಾಗೂ ಕ್ರಿಮಿನಲ್ ಸಂಚಿನ ಆರೋಪ ಹೊರಿಸಿದ್ದರು.
ಬುಧವಾರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಪವನ್ ಸಿಂಗ್ ರಾಜವತ್ ಅವರು, ‘‘ಪತ್ರಿಕೋದ್ಯಮವನ್ನು ನಮ್ಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಪರಿಗಣಿಸಲಾಗುತ್ತದೆ. ಅದಕ್ಕೆ ಸ್ವತಂತ್ರ್ಯವಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡದೆ ಇದ್ದರೆ, ಅದು ನಮ್ಮ ಪ್ರಜಾಪ್ರಭುತ್ವದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಬಹುದು’’ ಎಂದು ಅಭಿಪ್ರಾಯಿಸಿದ್ದಾರೆ.